ದಾವಣಗೆರೆ : ಶಿಕ್ಷಣ ತಜ್ಞ, ಜಾನಪದ ವಿದ್ವಾಂಸ, ದಾವಣಗೆರೆಯ ಪ್ರತಿಷ್ಟಿತ ಬಾಪೂಜಿ ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಹಾಗೂ ನಿವೃತ್ತ ಪ್ರಾಚಾರ್ಯ ಡಾ. ಎಂ.ಜಿ. ಈಶ್ವರಪ್ಪನವರು ದಿನಾಂಕ 01-06-2024ರಂದು ನಿಧನರಾದರು. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. “ಜಾನಪದ ವಿದ್ವಾಂಸ ಡಾ. ಜೀ.ಶಂ. ಪರಮಶಿವಯ್ಯನವರ ನೆಚ್ಚಿನ ಶಿಷ್ಯರಾದ ಈಶ್ವರಪ್ಪನವರು ಚಿತ್ರದುರ್ಗವನ್ನು ಕೇಂದ್ರವಾಗಿರಿಸಿದ ಮಧ್ಯ ಕರ್ನಾಟಕದ ಜಾನಪದ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳನ್ನು ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಅವರು ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದನ್ನು ಸ್ಮರಿಸಿ 1992ರಲ್ಲಿ ದಾವಣಗೆರೆಯಲ್ಲಿ ಡಾ. ಜಿ.ಎಸ್. ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಕಾಣಲು ಈಶ್ವರಪ್ಪನವರ ದಕ್ಷತೆಯೇ ಕಾರಣ. 1987ರಿಂದ 1990ರವರೆಗೆ ಮೈಸೂರು ವಿಶ್ವವಿದ್ಯಾನಿಲಯ ಮತ್ತು 2003ರಿಂದ 2006ರವೆರಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು 2007ರಿಂದ 2010ರವರೆಗೆ ಕುವೆಂಪು ವಿಶ್ವವಿದ್ಯಾಲಯ ಹೀಗೆ ಮೂರು ವಿಶ್ವವಿದ್ಯಾಲಯಗಳ ಸೆನೆಟ್ ಸದಸ್ಯರಾದ ವಿಶಿಷ್ಟ ದಾಖಲೆಯನ್ನು ಹೊಂದಿರುವ ಈಶ್ವರಪ್ಪನವರು ಬಾಪೂಜಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾಗಿ ಆ ಸಂಸ್ಥೆಗಳನ್ನು ಬೆಳೆಸಿದ ಕ್ರಮ ಮಾದರಿ ಎನ್ನಿಸುವಂತಿದೆ” ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಮ್ಮ ನುಡಿ ನಮನವನ್ನು ಸಲ್ಲಿಸಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆ ಹಾಡೋನಹಳ್ಳಿಯವರಾದ ಎಂ.ಜಿ. ಈಶ್ವರಪ್ಪನವರು ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದ ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಮತ್ತು ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಇವರು ರಂಗಭೂಮಿಯ ನಂಟು ಹೊಂದಿದ್ದರು. ಚಂಪಾ ಅವರ ‘ಕೊಡೆಗಳು’ ನಾಟಕದಲ್ಲಿ ಅಭಿನಯಿಸಿದ್ದರು. ಅಚ್ಚುಕಟ್ಟು ಕನ್ನಡ ಬಳಕೆ, ಅಪಾರ ಜ್ಞಾನದಿಂದಲೇ ದಾವಣಗೆರೆ ಜನತೆಯ ಮನಗೆದ್ದಿದ್ದರು. ವೈಚಾರಿಕ ಪ್ರಜ್ಞೆವುಳ್ಳವರಾಗಿದ್ದ ಈಶ್ವರಪ್ಪ ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ, ಸಾಣೆಹಳ್ಳಿಯ ಶಿವಸಂಚಾರ ಕಲಾತಂಡಗಳಿಂದ ಸಹಕಾರದೊಂದಿಗೆ ನಾಟಕಗಳನ್ನು ಪ್ರದರ್ಶಿಸಿದ್ದರು. ರಂಗಭೂಮಿಗೆ ಅವರು ನೀಡಿದ ಕೊಡುಗೆ ಅಪಾರ, ಎಪ್ಪತ್ತರ ದಶಕದಲ್ಲಿ ದಾವಣಗೆರೆಯಲ್ಲಿ ಪ್ರತಿಮಾ ಸಭಾ ಸ್ಥಾಪಿಸಿದ ನಾಟಕ ಮತ್ತು ಚಲನಚಿತ್ರಗಳ ಕುರಿತು ವಿಶೇಷ ಚರ್ಚೆಗಳನ್ನು ನಡೆಸಿದ್ದರು. ಜಾನಪದ-ನಾಟಕ-ಚಲನಚಿತ್ರ ಮೂರಕ್ಕೂ ಇದ್ದ ಸಂಬಂಧದ ಬಗ್ಗೆ ಚಿಂತಿಸಿದ ವಿರಳ ವಿದ್ವಾಂಸರಲ್ಲಿ ಅವರೂ ಒಬ್ಬರು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.