ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಮತ್ತು ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ ಈ ಸಂಸ್ಥೆಗಳು ಜೊತೆ ಸೇರಿ ಹದಿನೈದು ದಿನಗಳ ಉಚಿತ ತುಳು ಲಿಪಿ ಕಲಿಕಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ನೆರವೇರಿದೆ. ಈ ಕಾರ್ಯಕ್ರಮವು ಮಂಗಳೂರಿನ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ವಿಭಾಗದಲ್ಲಿ ದಿನಾಂಕ 20-11-2023ರಂದು ಸಂಜೆ 5.30ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಮಂಗಳೂರಿನ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಮಾಧವ ಎಂ.ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ಮಾತನಾಡುತ್ತಾ “ತುಳುವಿಗೆ ಲಿಪಿ ಇಲ್ಲ ಎಂಬ ವದಂತಿಯಿದೆ. ಸುಮಾರು 1,300 ತುಳು ಲಿಪಿಯ ತಾಡವೋಲೆಗಳು ಧರ್ಮಸ್ಥಳದಲ್ಲಿ ಈಗಲೂ ಪ್ರಸ್ತುತವಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಈಗಾಗಲೇ ಬಹಳಷ್ಟು ಕೆಲಸಗಳು ನಡೆದಿವೆ. ಈಗ ನಾವೆಲ್ಲರೂ ಸೇರಿ ಅದಕ್ಕೆ ಪೂರಕವಾಗಿ ಇನ್ನಷ್ಟು ಕಾರ್ಯಪ್ರವೃತರಾಗುವ ಅಗತ್ಯವಿದೆ.” ಎಂದರು.
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀದೇವಿ ಎಲ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ತುಳು ಲಿಪಿ ಮಾತ್ರಾ ಅಲ್ಲ, ವಾಕ್ಯಗಳನ್ನೂ ನಿರರ್ಗಳ ಬರೆಯುವಂತಾಗಿ ತುಳು ಲಿಪಿಯಲ್ಲಿಯೇ ಸಾಹಿತ್ಯ ರಚನೆಯಾಗಲಿ” ಎನ್ನುತ್ತಾ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿ.ವಿ. ಸಂಧ್ಯಾ ಕಾಲೇಜಿನ ಎಂ.ಕಾಂ.ಮತ್ತು ಎಂ.ಬಿ.ಎ. ವಿಭಾಗದ ಸಂಯೋಜಕರಾದ ಡಾ. ಯತೀಶ್ ಕುಮಾರ್ ಮಾತನಾಡಿ ತುಳುವಿನ ವಿವಿಧ ರೀತಿಯ ಉಚ್ಛಾರಣೆಗಳ ಮಾಹಿತಿಯೊಂದಿಗೆ ತುಳು ಭಾಷೆಯ ವಿಶೇಷತೆಯನ್ನು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ್ ನಾಯಕ್ “ತುಳು ಒಂದು ಸುಂದರ ಭಾಷೆ. ಭಾಷಾಭಿಮಾನ ಪ್ರತೀಯೊಬ್ಬರಿಗೂ ಇರುತ್ತದೆ. ಭಾಷಾ ಬಾಂಧವ್ಯವು ನಮ್ಮನ್ನು ಸೇರಿಸುತ್ತದೆ. ಭಾಷೆಯ ಆಭಿವೃದ್ಧಿಗೆ ಲಿಪಿಯ ಅಗತ್ಯವಿದೆ” ಎಂದರು.
ಬ್ಯಾರಿ ಪೀಠದ ಸಂಯೋಜಕರಾದ ಡಾ. ಅಬೋಕ್ಕರ್ ಸಿದ್ಧಿಕ್ ಇವರು ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ‘ಪ್ರಸ್ತುತ ತುಳು ಭಾಷೆಯಲ್ಲಿ ಶಬ್ಧಗಳು ಮಾಯವಾಗಿ ಅನ್ಯ ಭಾಷೆಯ ಶಬ್ಧಗಳು ಸೇರಿಕೊಂಡಿರುವುದು ಶೋಚನೀಯ. ಈ ಭಾಷೆಯನ್ನು ಮಾತನಾಡಲು ತಿಳಿಯದವರಿಗೆ ಮತ್ತು ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ನಡೆಯಬೇಕು. ಮಾಯವಾದ ಶಬ್ದಗಳನ್ನು ಕಂಡು ಹಿಡಿದು ತುಳು ಭಾಷೆಗೆ ಸೇರಿಸಿ ಭಾಷೆಯನ್ನು ಶ್ರೀಮಂತಗೊಳಿಸುವ” ಎಂದರು.
ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ತುಳು ಲಿಪಿ ಬರವಣಿಗೆಯ ತರಬೇತಿ ನೀಡಿದ ಖ್ಯಾತಿಯ ಶಿಕ್ಷಕರಾದ ಶ್ರೀಮತಿ ಗೀತಾ ಲಕ್ಷ್ಮೀಶ್, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಗೀತಾ ಜೈನ್ ಹಾಗೂ ಶ್ರೀ ಪ್ರಸಾದ್ ಅಂಚನ್ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 42 ಮಂದಿ ಕಲಿಕಾರ್ಥಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
‘ಓಂ’ ಮತ್ತು ‘ಶ್ರೀ’ಯನ್ನು ತುಳು ಲಿಪಿಯಲ್ಲಿ ಬರೆಯುವುದರ ಮೂಲಕ ಅಂದಿನ ತರಗತಿ ಆರಂಭವಾಯಿತು. ಪ್ರಥಮ ವರ್ಷದ ತುಳು ಸ್ನಾತಕೋತ್ತರ ಅಧ್ಯಯನದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶ್ರೀಮತಿ ಚಂದ್ರಿಕಾ ಕೈರಂಗಳ ಕಾರ್ಯಕ್ರಮ ನಿರೂಪಿಸಿ, ತುಳು ಸ್ನಾತಕೋತ್ತರ ವಿಭಾಗದ ಶಿಕ್ಷಕಿ ಶ್ರೀಮತಿ ಪ್ರಶಾಂತಿ ವಂದನಾರ್ಪಣೆ ಗೈದರು.