ತೆಕ್ಕಟ್ಟೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-100’ ಕಾರ್ಯಕ್ರಮದಡಿಯಲ್ಲಿ ‘ದೊಂದಿ ಬೆಳಕಿನ ಹಾಗೂ ಮಂದ ಬೆಳಕಿನ ಯಕ್ಷಗಾನ’ ಮತ್ತು ವಿಶ್ರಾಂತ ಕಲಾವಿದರಿಂದ ‘ಗಾನ ವೈಭವ’ ದಿನಾಂಕ 19 ಜನವರಿ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಲಾಸ್ 1, ಕಂಟ್ರ್ಯಾಕ್ಟರ್ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ “ಇಪ್ಪತ್ತೈದರ ‘ಬೆಳ್ಳಿ ಹಬ್ಬ’ದ ಸಂಸ್ಥೆಯಾದ ಯಶಸ್ವೀ ಕಲಾವೃಂದ ಕಳೆದ ಇಪ್ಪತ್ತೈದು ವರ್ಷಗಳಿಂದ ಕಲೆಯ ಉಳಿವಿಗಾಗಿ ಶ್ರಮಿಸಿ, ಈ ವಸಂತದಲ್ಲಿ 100 ಕಾರ್ಯಕ್ರಮ ಈಗಾಗಲೇ ನಿರ್ವಹಿಸಿರುವುದು ಸಣ್ಣ ವಿಶಯವಲ್ಲ. ಈ ತಂಡಕ್ಕೆ ಇನ್ನಷ್ಟು ಸಹಕಾರ ಸರಕಾರದಿಂದ ದೊರೆತು ಶಕ್ತಿ ವೃದ್ಧಿಸಲಿ” ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಡಾ. ಶಿವರಾಮ ಶೆಟ್ಟಿ ಮಾತನಾಡಿ “ವರ್ಷವಿಡೀ ನಿರಂತರತೆಯನ್ನು ಕಾಯ್ದುಕೊಳ್ಳುವುದು ಬಹಳ ಕಷ್ಟ. ಒಂದೇ ವರ್ಷದಲ್ಲಿ 108ಕಾರ್ಯಕ್ರಮದ ಸಂಕಲ್ಪಕ್ಕೆ ಮನ ಮಾಡಿದ ಸಂಸ್ಥೆಗೆ ಸರಕಾರ ಸಹಕಾರ ಮಾಡದಿದ್ದರೆ ತಪ್ಪಾದೀತು. ಉಡುಪಿ ಭಾಗದಲ್ಲಿ ಮುರಳಿ ಕಡೆಕಾರ್ ಒಂದು ದೊಡ್ಡ ಶಕ್ತಿ ಹೇಗೋ, ಹಾಗೆಯೆ ಈ ಭಾಗದಲ್ಲಿ ಯಶಸ್ವೀ ಕಲಾವೃಂದ ಕಲೆಯ ಕಲಿಕೆಗಾಗಿ ದೊಡ್ಡ ಶಕ್ತಿ. ಈ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಮಣಿಪಾಲದ ಮಾಹೆಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಅಧಿಕಾರಿಯಾದ ಡಾ. ಜಗದೀಶ್ ಶೆಟ್ಟಿ ಮಾತನಾಡಿ ಇತಿಹಾಸದಿಂದಲೇ ನಮ್ಮ ಜಿಲ್ಲೆ ಕಲೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಮೆರೆದಿದೆ. ಇಂತಹ ಇತಿಹಾಸದ ಪರಂಪರೆಯನ್ನು ಮುಂದುವರಿಸಿ ಗಟ್ಟಿಯಾಗಿ ನಿಂತ ಸಂಸ್ಥೆ ‘ಯಶಸ್ವೀ ಕಲಾವೃಂದ’” ಎಂದರು.
ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ “ಸೀಮಿತವಾಗಿ ಯಾವುದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳದೇ ತೆರೆದ ಬಾಗಿಲನ್ನು ಕೊಟ್ಟ ಕೆಲವೇ ಕೆಲವು ಸಂಸ್ಥೆಗಳಲ್ಲಿ ಯಶಸ್ವೀ ಕಲಾವೃಂದವೂ ಸೇರಿದೆ. ಈ ಸಂಸ್ಥೆ ಸಮಾಜದ ಆಸ್ತಿ. ಈ ಸಂಸ್ಥೆಗೆ ಸಾರ್ವಜನಿಕರು ಕೈ ಜೋಡಿಸಬೇಕಾದ ಅಗತ್ಯದೆ ಇದೆ” ಎಂದರು. ಯಶಸ್ವಿ ಕಲಾವೃಂದದ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ವಿಶ್ರಾಂತ ಕಲಾವಿದರಿಂದ ‘ಗಾನ ವೈಭವ’ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದೊಂದಿ ಹಾಗೂ ಮಂದ ಬೆಳಕಿನ ಯಕ್ಷಗಾನ ‘ವಾಲಿವಧೆ’ ಪ್ರಸ್ತುತಿಗೊಂಡಿತು.