ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ಜಂಟಿ ಸಹಯೋಗದೊಂದಿಗೆ ನವೆಂಬರ್ ತಿಂಗಳ ‘ಸಡಗರ 2023’ ಕಾರ್ಯಕ್ರಮದ ಅಂಗವಾಗಿ ‘ಗಾನಯಾನ’ ಕನ್ನಡ ಗೀತಗಾಯನವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ರಾಡಿ ಇಲ್ಲಿ ದಿನಾಂಕ 07-11-2023ರಂದು ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಇವರು “ಕನ್ನಡ ಗೀತ ಗಾಯನದ ಮೂಲಕ ವಿದ್ಯಾರ್ಥಿಗಳಲ್ಲಿ ಸದಭಿರುಚಿಯನ್ನು ಮೂಡಿಸಿ ಕನ್ನಡ ಕಂಪು ಮನೆಮನೆಗಳಲ್ಲಿ ಪಸರಿಸಲಿ” ಎಂದು ಹೇಳಿದರು. “ಚಾಣಕ್ಯ ಸಂಸ್ಥೆ ಹಮ್ಮಿಕೊಂಡ ಗೀತಗಾಯನ ಕಾರ್ಯಕ್ರಮ ಪ್ರತಿ ಹಳ್ಳಿಹಳ್ಳಿಗೂ ತಲುಪಲಿ. ವಿದ್ಯಾರ್ಥಿಗಳ ಬಾಯಲ್ಲಿ ಗೀತೆ ಸದಾ ನಲಿದಾಡಲಿ” ಎಂದು ಲಯನ್ಸ್ ಅಧ್ಯಕ್ಷರಾದ ರಘುರಾಮ ಶೆಟ್ಟಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಹೆಬ್ರಿ ಸಿಟಿ ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ, ಸರಕಾರಿ ನೌಕರರ ಸಂಘ ಹೆಬ್ರಿ ತಾಲೂಕು ಇದರ ಅಧ್ಯಕ್ಷರಾದ ಹರೀಶ ಪೂಜಾರಿ, ಚಾಣಕ್ಯ ಸಂಸ್ಥೆಯ ಅಧ್ಯಕ್ಷರಾದ ಉದಯ ಶೆಟ್ಟಿ ಮತ್ತು ನಿವೃತ್ತ ಶಿಕ್ಷಕರಾದ ಗಣಪತಿ ಪೈ ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯಿಂದ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ರಘುರಾಮ ಶೆಟ್ಟಿಯವರಿಂದ ಸ್ವರಚಿತ ಕವನ ವಾಚನ ನಡೆಯಿತು. ಉದಯ ಶೆಟ್ಟಿ ಪ್ರಸ್ತಾಪಿಸಿ ಸ್ವಾಗತಿಸಿದರು. ಸತೀಶ ಬೇಳಂಜೆ ನಿರೂಪಿಸಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಗಾಯನದ ಸವಿಯನ್ನುಂಡರು.