ಕರಿಕೆ : ಕರ್ನಾಟಕ ಗಡಿ ಸಾಂಸ್ಕೃತಿಕ ಉತ್ಸವ ಆಚರಣಾ ಸಮಿತಿಯು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪು 2022-23ನೇ ಸಾಲಿನಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಹಿತ್ಯ ಪರಿಷತ್ತು. ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕರಿಕೆ ಗಡಿ ಸಾಂಸ್ಕೃತಿಕೋತ್ಸವ ಆಚರಣಾ ಸಮಿತಿ, ಕರಿಕೆ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ಗಡಿ ಉತ್ಸವ ಸಮಾರಂಭ’ವು ಕರಿಕೆಯ ಎಳ್ಳುಕೊಚ್ಚಿ ಬೇಕಲ್ ಉಗ್ಗಪ್ಪ ಮೈದಾನದಲ್ಲಿ ದಿನಾಂಕ 27-01-2024ರಂದು ಸಂಭ್ರಮದಿಂದ ನಡೆಯಿತು.
ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯಿಂದ ಎಳ್ಳುಕೊಚ್ಚಿ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕರಿಕೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿ. ಇಸಾಕ್, ಜಮಾಯತ್ ಸಮಿತಿಯ ಎಂ.ಇ. ಹಸೈನಾರ್ ಹಾಜಿ, ಅಯ್ಯಪ್ಪ ದೇವಾಲಯ ಪ್ರಮುಖ ಹೊಸಮನೆ ಎಂ. ರಾಘವ ಚಾಲನೆ ನೀಡಿದರು. ಶಾಲಾ ಮಕ್ಕಳು, ಗ್ರಾಮಸ್ಥರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಂಜೀವಿನಿ ಒಕ್ಕೂಟ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಸ್ವಸಹಾಯ ಗುಂಪುಗಳು, ಅಂಗನವಾಡಿ – ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿವಿಧ ಜನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳು, ವಿವಿಧ ವೇಷಧಾರಿಗಳನ್ನೊಳಗೊಂಡ ಮೆರವಣಿಗೆ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಇವರು ಉತ್ಸವಕ್ಕೆ ಚಾಲನೆ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಗಡಿ ಸಾಂಸ್ಕೃತಿಕ ಆಚರಣೆ ಸ್ವಾಗತ ಸಮಿತಿ ಮಹಾಪೋಷಕರಾದ ಟಿ.ಪಿ. ರಮೇಶ್ ಮಾತನಾಡಿ, “ಕನ್ನಡ ಭಾಷಾ ಏಕೀಕರಣಕ್ಕೆ ಹಲವರು ಹೋರಾಟ ಮಾಡಿದ್ದಾರೆ. ಗಡಿ ಭಾಗದಲ್ಲಿ ಇತರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡುವಂತಾಗಬೇಕು. ಎಲ್ಲರೂ ಸಹಬಾಳ್ವೆ ಮತ್ತು ಭ್ರಾತೃತ್ವದಿಂದ ಭಾಷಾ ಸೌಹಾರ್ದತೆ ಬೆಳೆಯಬೇಕು. ಗಡಿ ಪ್ರದೇಶದಲ್ಲಿ ಕನ್ನಡೇತರರರಿಗೆ ಕನ್ನಡ ಕಲಿಸುವಂತಾಗಬೇಕು. ಕರಿಕೆ ಗ್ರಾಮದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವಂತಾಗಬೇಕು. ಗಡಿ ಭಾಗದಲ್ಲಿ ಕನ್ನಡ ಭಾಷಾ ನಾಮಫಲಕಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಆಳವಡಿಸಬೇಕು. ಕನ್ನಡ ಭಾಷೆಯಲ್ಲಿ ಕನ್ನಡ ಪತ್ರ ವ್ಯವಹಾರ ಹಾಗೂ ಆಡಳಿತದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಬೇಕು. ಗಡಿಭಾಗದ ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಒದಗಿಸಬೇಕು” ಎಂದು ಕೋರಿದರು.
ಗಡಿ ಉತ್ಸವ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್ ಮಾತನಾಡಿ “ಕರಿಕೆ ಭಾಗಮಂಡಲ ರಸ್ತೆ ಅಭಿವೃದ್ಧಿಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. ಸಮುದಾಯ ಭವನ, ಆಟದ ಮೈದಾನ ಹಾಗೂ ಅತಿಥಿ ಗೃಹ ನಿರ್ಮಾಣವಾಗಬೇಕು. ಸ್ಥಳೀಯ ಬಡ ಜನರಿಗೆ ಹಕ್ಕು ಪತ್ರ ಮಂಜೂರಾತಿ ಮಾಡಬೇಕು. ಖಾಲಿ ಇರುವ ಶಿಕ್ಷಕರ ನೇಮಕಾತಿ ಭರ್ತಿ ಮಾಡಬೇಕು, ವಿದ್ಯುತ್ ಸಂಪರ್ಕ ಕಲ್ಪಿಸಬೇಕು” ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, “ಸರ್ಕಾರಿ ಶಾಲೆ ಜಾಗ ಒತ್ತುವರಿ ಮಾಡಿದ್ದಲ್ಲಿ ನಿಯಮಾನುಸಾರ ತೆರವುಗೊಳಿಸಲಾಗುವುದು. ಕರಿಕೆ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸಲಾಗುವುದು. ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರದ ನಿಯಮ ಪಾಲಿಸಬೇಕು” ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಎನ್. ಮುಸ್ತಫ ಮಾತನಾಡಿ, “ಗಡಿನಾಡು ಹಾಗೂ ಹೊರನಾಡು ಎಂದು ಬೇಲಿ ಹಾಕಿಕೊಳ್ಳಬಾರದು. ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು” ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ “ಗಡಿ ಭಾಗದಲ್ಲಿ ಕನ್ನಡ ಬಾಂಧವ್ಯ ಬೆಳೆಯಲು ಗಡಿ ಉತ್ಸವ ಸಹಕಾರಿಯಾಗಿದೆ” ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನಿರ್ ಅಹಮದ್, ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಸಾಪ ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೋ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವರಾಜ್, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಸರ್ಕಾರಿ ವಕೀಲರಾದ ಶ್ರೀಧರ ನಾಯರ್ ಇತರರು ಇದ್ದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೋಡಿ ಕೆ. ಪೊನ್ನಪ್ಪ, ಬೇಕಲ್ ಲೀಲಾವತಿ ರಮಾನಾಥ್, ಎನ್.ಸಿ. ಗಂಗಾಧರ್, ಬೇಕಲ್ ದಮಯಂತಿ ಕೃಷ್ಣಪ್ಪ, ರಾಧಕೃಷ್ಣ ನಂಬಿಯಾರ್, ಕೆ.ಎ. ಬೋಜಮ್ಮ. ಕೇಶವ ಮಡೆಕಾನ, ಟಿ.ಟಿ. ರಾಜೇಂದ್ರ, ನಂದಿತಾ ಬಿ.ಡಿ., ನಿನ್ನುಮೋಳ್, ಜೋತ್ಸ್ನಾ, ತನಿಷ್ಕಾ ಮುರುಳಿ, ಮನೋಹರ್ ಜಿ.ಬಿ, ಅಶೋಕ ಕೆ.ಎಸ್., ನಿಂಗಪ್ಪ ಹನುಮಣ್ಣನವರ್, ಚಂದ್ರಶೇಖರ ದಾಮ್ಲೆ, ಪ್ರವೀಣ್ ಕುಮಾರ್, ಸನತ್ ಕುಮಾರ್ ಬೊಳ್ಳೂರು, ಕಾರ್ಚಿ, ಜಾನಕಿ, ಕೆ.ಎ.ಎಂ.ಆರ್. ದೂಮ ನಾಯ್ಕ್, ರೋಯ್ ಜೋಸೆಫ್, ಜೋಷಿ ಜಾರ್ಜ್, ಇಮಾನ್ಯವಲ್ ಅನೆಪಾರೆ, ದೇವಂಗೋಡಿ ಸರಸ್ವತಿ, ಕೆ.ಜಾನಕಿ, ಲವೀನ್ ಇವರುಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಶೋಭಾ ಲಮಾಣಿ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.