ಕಾಸರಗೋಡು : ಬೀರಂತಬೈಲು ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಸಂಸ್ಥೆ ಹಾಗು ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿಯಾಗಿ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಆಯೋಜಿಸಿದ ‘ಕೇರಳ – ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕಂತಿಕ ಉತ್ಸವ’ ದಿನಾಂಕ 11-04-2024 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು “ದಿನದಿಂದ ದಿನಕ್ಕೆ ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಅಸ್ತಿತ್ವ ತೆರೆಮರೆಗೆ ಸರಿಯುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತೀಯೊಬ್ಬ ಕನ್ನಡಿಗನೂ ಕಂಕಣಬದ್ಧರಾಗಬೇಕು. ಸಾಹಿತ್ಯ ಹಾಗೂ ಕಲೆಗಳಿಂದ ನಮ್ಮ ಸಂಸ್ಕೃತಿಯ ಸಂವರ್ಧನೆ ಮತ್ತು ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕನ್ನಡ ಪರ ಚಟುವಟಿಕೆಗಳು ಇತರ ಸಂಘ ಸಂಸ್ಥೆಗಳಿಗೆ ಮಾದರಿ ಹಾಗು ಅನುಕರಣೀಯವಾಗಿದೆ.” ಎಂದು ಹೇಳಿದರು.
ಕಾಯಕ್ರಮವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ದೀಪ ಪ್ರಜ್ವಲನಗೈದು ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಶರಣಪ್ಪ ಗಬ್ಬೂರು ತಾಯಿ ಭುವನೇಶ್ವರೀ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ವಿ. ಬಿ. ಕುಳಮರ್ವ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ, ಗಡಿನಾಡ ಚೇತನ ಪ್ರಶಸ್ತಿ ವಿಜೇತ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕನ್ನಡ ಭವನ ನಿರ್ದೇಶಕ ಪ್ರೊ. ಎ. ಶ್ರೀನಾಥ್ ಕಾಸರಗೋಡು, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಡಾ. ತ್ಯಾಗರಾಜ್ ಟಿ. ಮೈಸೂರು, ಸಾಮಾಜಿಕ ಮುಂದಾಳು ಅರಿಬೈಲ್ ಗೋಪಾಲ ಶೆಟ್ಟಿ, ಬಿ. ಶಿವ ಕುಮಾರ್ ಕೋಲಾರ, ಧಾರ್ಮಿಕ ಮುಂದಾಳು ಶ್ರೀಧರ ಶೆಟ್ಟಿ ಮುಟ್ಟಮ್ ಮಂಗಲ್ಪಾಡಿ, ಕನ್ನಡ ಭವನದ ನಿರ್ದೇಶಕಿ ಸಂಧ್ಯಾರಾಣಿ ಟೀಚರ್, ಸತೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ವರ್ಣಭೂಮಿ ಫೌಂಡೇಶನ್ ವತಿಯಿಂದ ಸಾಧಕರಿಗೆ ಕೊಡಮಾಡುವ ಶತಶೃಂಗ ಪ್ರಶಸ್ತಿ, ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿ, ಕನ್ನಡ ಭವನದ ವತಿಯಿಂದ ಕೊಡಮಾಡುವ ಕನ್ನಡ ಪಯಸ್ವಿನಿ ಪ್ರಶಸ್ತಿ, ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಅಂತಾರಾಜ್ಯ ಕವಿಗೋಷ್ಠಿ ಹಾಗೂ ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಭವನ ಸ್ಥಾಪಕ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಬಿ. ಶಿವ ಕುಮಾರ್ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿ, ಅಪೂರ್ವ ಕಾರಂತ್ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ವಿಶಾಲಾಕ್ಷ ಪುತ್ರಕಳ ವಂದಿಸಿದರು.