ಮಂಗಳೂರು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ‘ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ’ ತಲಪಾಡಿಯ ವಿಶ್ವಾಸ ಆಡಿಟೋರಿಯಂನಲ್ಲಿ ದಿನಾಂಕ 26-08-2023ರಂದು ಅದ್ಧೂರಿಯಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಕನ್ನಡ ಚಟುವಟಿಕೆಗಳು ನಿರಂತರ ನಡೆಯಬೇಕು. ಗಡಿನಾಡಿನಲ್ಲಿ ಇಂತಹ ಕಾರ್ಯಕ್ರಮ ನಡೆಸುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿಗೆ ಇನ್ನಷ್ಟು ಶ್ರೀಮಂತಿಕೆ ಬರುತ್ತದೆ” ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ, “ಗಡಿನಾಡಿನ ಕನ್ನಡಿಗರು ಪರಕೀಯರಲ್ಲ, ರಾಜ್ಯ ಬೇರೆಯಾದರೂ ಭಾಷೆ, ಆಚಾರ ವಿಚಾರಗಳಿಂದ ಮಾನಸಿಕವಾಗಿ ಕರ್ನಾಟಕದೊಂದಿಗಿದ್ದಾರೆ. ಇಲ್ಲಿ ಭಾಷಾ ಸಾಮರಸ್ಯ ಕಾಪಾಡಿಕೊಂಡು ಕನ್ನಡ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ” ಎಂದರು.
“ಕಾಸರಗೋಡು ಒಳಗೊಂಡಂತೆ ಕರಾವಳಿಯ ಈ ಭಾಗ ವಿದ್ವತ್ ಪರಂಪರೆಗೆ ಅನನ್ಯ ಕೊಡುಗೆ ನೀಡಿದೆ. ಮಂಜೇಶ್ವರ ಗೋವಿಂದ ಪೈಗಳಿಂದ ಮೊದಲ್ಗೊಂಡು ಅನೇಕರು ಶಾಸ್ತ್ರ ಮತ್ತು ಕಾವ್ಯಗಳ ಕುರಿತಂತೆ ಅಧ್ಯಯನ ಕೃತಿಗಳನ್ನು ರಚಿಸಿದ್ದಾರೆ. ಆ ಕುರಿತು ಸಂಶೋಧನೆ ನಡೆಯಬೇಕು” ಎಂದು ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ ಹೇಳಿದರು.
ಗಡಿನಾಡ ಕನ್ನಡ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಭಾಷಣ ಮಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ “ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಂಞಣ್ಣ ರೈ, ಪಾರ್ತಿಸುಬ್ಬ ಮೊದಲಾದವರ ಸೇವೆ ಯಾವತ್ತಿಗೂ ಸ್ಮರಣೀಯ. ಇದು ತುಳುನಾಡು ಆಗಿದ್ದರೂ ಕನ್ನಡಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ. ಭಾಷೆಯ ಹೆಸರಿನಲ್ಲಿ ಪ್ರತ್ಯೇಕಿಸುವುದಾದರೆ ಕನ್ನಡಿಗರ ಮೇಲೆ ಇತರ ಭಾಷೆಯ ಒತ್ತಡ ಹೇರಬಾರದು” ಎಂದರು.
ಇದೇ ಸಂದರ್ಭದಲ್ಲಿ ಸಾಧಕರಾದ ಡಾ. ರಮಾನಂದ ಬನಾರಿ, ಪತ್ರಕರ್ತ ಮಲಾರ್ ಜಯರಾಮ್ ರೈ, ಸಾಹಿತಿ ಹಸನಬ್ಬ, ಪತ್ರಕರ್ತ ಪುರುಷೋತ್ತಮ ಪೆರ್ಲ ಹಾಗೂ ಡಾ. ಪ್ರಮೀಳಾ ಮಾಧವ ಅವರನ್ನು ಸನ್ಮಾನಿಸಲಾಯಿತು. ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ದ.ಕ. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ತಲಪಾಡಿ ಗ್ರಾ.ಪಂ. ಅಧ್ಯಕ್ಷ ಟಿ.ಇಸ್ಮಾಯಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ನಿರ್ದೇಶಕ ರಾಜೇಶ್ ಜಿ., ಗಡಿನಾಡ ಕನ್ನಡ ಉತ್ಸವ ಗೌರವಾಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿ ಮಾತನಾಡಿದರು. ತಲಪಾಡಿ ದೇವಿನಗರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಭಟ್ ಉಪಸ್ಥಿತರಿದ್ದರು. ಗಡಿನಾಡ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿ, ಡಾ. ಧನಂಜಯ ಕುಂಬ್ಳೆ ನಿರೂಪಿಸಿ, ವಿನಯ ಆಚಾರ್ಯ ವಂದಿಸಿದರು.
ಗಡಿನಾಡ ಸಮಸ್ಯೆ – ಸವಾಲುಗಳು ಸಂವಾದದಲ್ಲಿ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಕಾಲೇಜು ಕಾಸರಗೋಡು ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಕಾರ್ತಿಕ ಪಡ್ರೆ ಮತ್ತಿತರರು ಮಾತನಾಡಿದರು. ಗಡಿನಾಡಿನ ಸಾಹಿತ್ಯ ಪರಂಪರೆ ಕುರಿತು ವಿಶೇಷ ಉಪನ್ಯಾಸ, ಬಹುಭಾಷಾ ಕವಿಗೋಷ್ಠಿ ಮತ್ತು ಸಂವಾದ ಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ನೃತ್ಯ ಸಂಭ್ರಮ, ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ಸಾಹಿತ್ಯ-ಗಾನ-ನೃತ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್ ಮತ್ತು ವಸಂತ ಬಾರಡ್ಕ ಅವರಿಂದ ಕವಿ ಗಾಯನ ಪ್ರಸ್ತುತಗೊಂಡಿತು. ವಿಜಯ ಕರ್ನಾಟಕ ಪತ್ರಿಕೆಯನ್ನು ಉಚಿತವಾಗಿ ಹಂಚಲಾಯಿತು.