07 ಏಪ್ರಿಲ್ 2023, ಮಂಗಳೂರು: ಮಂಗಳೂರು ಗಮಕ ಪರಿಷತ್ತಿನ ವತಿಯಿಂದ ತಲಪಾಡಿಯ ದೇವಿನಗರದ ಶ್ರೀಮತಿ ಮತ್ತು ಶ್ರೀ ಮಂಜುನಾಥ ಭಟ್ ಇವರ ಮನೆಯಂಗಳದಲ್ಲಿ ಚೊಚ್ಚಲ ಕಾರ್ಯಕ್ರಮ ನಡೆಯಿತು. ಗಮಕ ಕಾರ್ಯಕ್ರಮಕ್ಕೆ ಜನರು ಬರುವುದಲ್ಲ, ಜನರಿದ್ದಲ್ಲಿಗೆ ನಾವೇ ಹೋಗಿ ಕಾರ್ಯಕ್ರಮ ನೀಡಿ ಜನರಲ್ಲಿ ಗಮಕದ ಬಗ್ಗೆ ಆಸಕ್ತಿ ಕೆರಳಿಸಿ ಅಭಿರುಚಿ ಉಂಟು ಮಾಡುವುದೇ ಮನೆ ಮನೆ ಗಮಕ ಕಾರ್ಯಕ್ರಮದ ಉದ್ದೇಶ. ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀಯುತ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಮೃತ ಹಸ್ತದಿಂದ ದೀಪ ಬೆಳಗುವುದರೊಂದಿಗೆ ಮನೆ ಮನೆ ಗಮಕದ ಮೊದಲ ಪಲ್ಲವ ಚಿಗುರೊಡೆಯಿತು. ಕಾರ್ಯಕ್ರಮದ ಅನಿವಾರ್ಯತೆ, ಉದ್ದೇಶ, ಇತಿಹಾಸ ಮತ್ತು ಮಹತ್ವ ತಿಳಿಸಿದ ಕಲ್ಕೂರರು ಈ ಗಮಕ ಪಲ್ಲವ ಚಿಗುರಿ, ರೆಂಬೆ ಕೊಂಬೆಗಳಿಂದ ಸಮೃದ್ಧವಾಗಿ ಹೂತು, ಕಾಯಾಗಿ ಹೊಸ ಹೊಸ ಮರಗಳು ಹುಟ್ಟಿ ನಂದನವನವಾಗಲಿ ಎಂದು ಹಾರೈಸಿದರು. ಕುಮಾರವ್ಯಾಸ ಭಾರತದ ದೂರ್ವಾಸ ಆತಿಥ್ಯ ಭಾಗವನ್ನು ಗಮಕಿ ಸುರೇಶ್ ರಾವ್ ಅತ್ತೂರು ವಾಚಿಸಿದರು. ವಿದ್ವಾಂಸರಾದ ಸರ್ಪಂಗಳ ಈಶ್ವರ ಭಟ್ ಅವರು ಮನೋಜ್ಞವಾಗಿ ವ್ಯಾಖ್ಯಾನ ಮಾಡಿದರು. ಕಾರ್ಯಕ್ರಮದ ಮೊದಲಲ್ಲಿ ಗಮಕ ವಿದ್ಯಾರ್ಥಿಗಳು ಮಾಡಿದ ಗಮಕ ವಾಚನ ಚಿತ್ತಾಕರ್ಷಕವಾಗಿತ್ತು. ಶ್ರೀಮತಿ ವಾಣಿಶ್ರೀ ಶುಭಕರ್ ಪ್ರಾರ್ಥಿಸಿ, ಶ್ರೀ ಮಂಜುನಾಥ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಶುಭಕರ್ ವಂದನಾರ್ಪಣೆ ಅಲ್ಲದೆ ಕಾರ್ಯಕ್ರಮ ನಿರೂಪಿಸಿದರು.