ವಿಜಯಪುರ : ಶ್ರಾವಣ ಮಾಸದಲ್ಲಿ ವಿಜಯಪುರ ನಗರದ ಅನೇಕ ಕಡೆಗಳಲ್ಲಿ ಗಮಕ ಕಾರ್ಯಕ್ರಮವು ಅವ್ಯಾಹತವಾಗಿ ನಡೆಯುತ್ತಿದೆ. ಇದರ ಅಂಗವಾಗಿ ಗಮಕ ವಿದೂಷಿ ಶ್ರೀಮತಿ ಶಾಂತಾ ಕೌತಾಳ್ ಇವರುಗಳು 25 ಆಗಸ್ಟ್ 2024ರಶ್ರಾವಣ ಮಾಸದ ಕೃಷ್ಣಪಕ್ಷ ಸಪ್ತಮಿ ತಿಥಿಯಂದು ನಗರದ ದಿವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಿಯಲ್ಲಿ ಭಕ್ತಮಂಡಳಿಯವರಿಗಾಗಿ ಗಮಕ ಕಾರ್ಯಕ್ರಮ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಗದುಗಿನ ಭಾರತದ ಉದ್ಯೋಗ ಪರ್ವದ `ವಿದುರನೀತಿ’ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತು. ಗಮಕ ವಿದೂಷಿ ಶ್ರೀಮತಿ ಶಾಂತಾ ಕೌತಾಳ್, ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಶ್ರೀಮತಿ ಭೂದೇವಿ ಕುಲಕರ್ಣಿ ಇವರುಗಳು ಕಾವ್ಯದ ವಾಚನವನ್ನು ಸುಶ್ರಾವ್ಯವಾಗಿ ಮಾಡಿದರು. ಶ್ರೀ ಕಲ್ಯಾಣರಾವ್ ದೇಶಪಾಂಡೆಯವರು ಇದರ ವ್ಯಾಖ್ಯಾನ ಮಾಡುತ್ತ ಧೃತರಾಷ್ಟ್ರನಿಗೆ ವಿದುರನು ಮನಸಿನ ಸಮಾಧಾನಕ್ಕಾಗಿ ಇಡೀ ರಾತ್ರಿ ಉಪದೇಶಿಸಿದ ವಿದುರ ನೀತಿಯ ಕೆಲಪದ್ಯಗಳ ಅರ್ಥವನ್ನು ವಿವರಿಸಿದರು. “ಧೃತರಾಷ್ಟ್ರ, ನೀನು ಹಾವು ಹಡೆದಂತೆ ನೂರು ಮಕ್ಕಳನ್ನು ಹಡೆದು ಲೋಕಕ್ಕೆ ಕಂಟಕನಾದೆ. ಇದರ ಬದಲು ಅರ್ಜುನನಂತಹ ಒಬ್ಬ ಮಗನನ್ನು ಪಡೆದಿದ್ದರೆ ನಿನ್ನ ಬದುಕು ಸಾರ್ಥಕವಾಗುತ್ತಿತ್ತು. ನಿನಗೆ ಆಪ್ತರೂ ಹಾಗೂ ತಮ್ಮನ ಮಕ್ಕಳಾದ ಪಾಂಡವರನ್ನು ಬಿಟ್ಟು ನಿನ್ನ ಅರಮನೆಯಲ್ಲಿ ಮೋಸದಿಂದ ತಿಂದು ತೇಗುತ್ತಿರುವ ಶಕುನಿ, ಕರ್ಣ ಮುಂತಾದವರನ್ನು ನಂಬಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿರುವೆ. ಈಗಲಾದರೂ ಸತ್ಯವನ್ನು ತಿಳಿದುಕೊ. ಎಲ್ಲಿ ಕೃಷ್ಣನಿದ್ದಾನೆ ಅಲ್ಲಿ ಅರ್ಜುನನಿದ್ದಾನೆ. ಎಲ್ಲಿ ಕೃಷ್ಣಾರ್ಜುನರಿರುವರೋ ಅಲ್ಲಿ ಯಾವಾಗಲೂ ವಿಜಯಶ್ರೀ ಒಲಿಯುವಳು. ಅದಕ್ಕಾಗಿ ಈಗಲಾದರೂ ನಿನ್ನ ಮಗನಿಗೆ ಬುದ್ಧಿ ಹೇಳಿ ಪಾಂಡವರಿಗೆ ಅರ್ಧ ರಾಜ್ಯವನ್ನು ಕೊಟ್ಟು ಒಪ್ಪಂದ ಮಾಡಿಕೊ. ಇಲ್ಲದಿದ್ದರೆ ಇದು ನಿನ್ನ ವಿನಾಶಕ್ಕೆ ಕಾರಣವಾಗುತ್ತದೆ.” ಎಂದು ಹೇಳಿದನು. ಜಂಗಮ – ಜನಾರ್ದನ ಸ್ವರೂಪಿಗಳಾದ ಕೇಳುಗರು ಕಾರ್ಯಕ್ರಮವನ್ನು ತುಂಬಾ ಆನಂದಿಸಿದರು. ಸಮಾರಂಭದಲ್ಲಿ ಬಂದ ಎಲ್ಲ ಅತಿಥಿಗಳಿಗೆ ಗುರುಗಳಾದ ಶ್ರೀಮತಿ ಶಾಂತಾ ಕೌತಾಳ್ ಇವರುಗಳು ಉಡುಗೊರೆ ಕಾಣಿಕೆಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಗೆ ರಾಘವೇಂದ್ರ ಮಠದಲ್ಲಿ ಎಲ್ಲರಿಗೂ ತೀರ್ಥ-ಪ್ರಸಾದ ಹಾಗೂ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಯೋವೃದ್ಧರಾದ ಶ್ರೀಮತಿ ಶಾಂತಾ ಕೌತಾಳ್ ಇವರ ಬಂಧುಗಳು ಹಾಗೂ ಅಭಿಮಾನಿಗಳಾದಂತಹ ಪ್ರಮಿಳಾ ದೇಶಪಾಂಡೆ, ಮಂಜುಳಾ ಪಾಟೀಲ್, ವಿಜಯೀಂದ್ರ ಪಾಟೀಲ್, ಲಕ್ಷ್ಮೀ ಕೌತಾಳ್, ಮೋಹನ್ ಕೌತಾಳ್, ಅನುರಾಧಾ ಜಹಾಗೀರದಾರ್, ವಿಮಲಾ ಕುಲಕರ್ಣಿ, ಸಂಜೀವ್ ಕುಲಕರ್ಣಿ, ವಿನಾಯಕ್ ಕಟ್ಟಿ, ಹೇಮಾ ಕಟ್ಟಿ, ಸಂಗೀತ ಕಲಾವಿದರಾದ ಹರೀಶ್ ಹೆಗಡೆ, ವಯೋಲಿನ್ ರವಿ, ಜಗನ್ನಾಥ ಅಳ್ಳಗಿ, ಓಂಕಾರ್ ಅಳ್ಳಗಿ, ಶ್ರೀಪಾದ್ ಅಠಲ್ಯೆ, ವಿಶಾಲ್ ಕಟ್ಟಿ, ಶಾರದಾ ಉಮರ್ಜಿ, ಪೂರ್ಣಿಮಾ ಯಾತಗಿರಿ, ಲೀಲಾ ಝಳಕಿ ಮುಂತಾದವರು ಭಾಗವಹಿಸಿದ್ದರು.