ಬದಿಯಡ್ಕ : ಕರ್ನಾಟಕ ಗಮಕ ಕಲಾ ಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಗಳ ಕೇರಳ ಗಡಿನಾಡು ಘಟಕಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 19 ಆಗಸ್ಟ್ 2024ರಂದು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ‘ಗಮಕ ಶ್ರಾವಣ’ ಸಮಾರಂಭವು ಜರಗಿತು.
ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀ ಟಿ. ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಶ್ರೀ ಜಯಪ್ರಕಾಶ್ ಪಜಿಲ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಅನಂತಕೃಷ್ಣ ಚಡಗ ಅವರು ಭಾಗವಹಿಸಿ ಗಮಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಯುವಜನರ ಜವಾಬ್ದಾರಿಯನ್ನು ನೆನಪಿಸಿದರು.
ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶ್ರೀ ವಿ.ಬಿ. ಕುಳಮರ್ವ ಅವರು ಪ್ರಾಸ್ತಾವಿಕ ಭಾಷಣದಲ್ಲಿ ಗಮಕ ಕಲೆಯ ಪ್ರಾಚೀನತೆಯನ್ನು ತಿಳಿಸುತ್ತಾ ಅದು ಬೆಳೆದು ಬಂದ ಬಗೆಯನ್ನು ಸೋದಾಹರಣವಾಗಿ ವಿವರಿಸಿದರು. ಗಡಿನಾಡು ಕಾಸರಗೋಡಿನಲ್ಲಿ ಗಮಕ ಕಲಾ ಪರಿಷತ್ತು ಮಾಡಿದ ಸಾಧನೆಯನ್ನು ಕುರಿತು ಮಾತನಾಡುತ್ತಾ ಆದಿ ಗಮಕಿಗಳಾದ ಕುಶ-ಲವರ ಜನ್ಮ ಮಾಸಾಚರಣೆಯ ಅಂಗವಾಗಿ ತಾವು ನಡೆಸಿಕೊಂಡು ಬರುತ್ತಿರುವ ಶ್ರಾವಣ ಮಾಸದ ಸರಣಿ ಗಮಕ ಕಾರ್ಯಕ್ರಮಗಳ ಔಚಿತ್ಯಗಳನ್ನೂ ತಿಳಿಸಿದರು.
ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದಾಯ್ದ ಭಾಗದ ವಾಚನವನ್ನು ಗಮಕಿ ಶ್ರೀ ಕೊಚ್ಚಿ ಗೋಪಾಲಕೃಷ್ಣ ಭಟ್ಟರು ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಇವರು ವ್ಯಾಖ್ಯಾನಗೈದರು. ಶ್ರೀ ವಿ.ಬಿ. ಕುಳಮರ್ವ ವಿರಚಿತ ಭಾಮಿನೀ ಷಟ್ಪದಿಯ ‘ಗಮಕ ಗೀತೆ’ಯನ್ನು ವಿದ್ಯಾರ್ಥಿನಿಯರು ಹಾಡಿದರು. ಡಾ. ಬೇ.ಸೀ. ಗೋಪಾಲಕೃಷ್ಣ ವಂದಿಸಿದರು.