ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಗಮಕ ಪರಿಷತ್ತು ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜೀವನದೀಪ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 07 ಜನವರಿ 2026ರಂದು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತು.
ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲ್ ಹಾಗೂ ಜೀವನದೀಪ ಶಾಲೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಮೊಗೇರಾ ಇವರುಗಳು ಕಾರ್ಯಕ್ರಮದ ಸಂಘಟನೆಯನ್ನು ಮಾಡಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಬಿ.ಕೆ. ಗೋಟ್ಯಾಳ್ ಇವರುಗಳು ಸಸಿಗೆ ನೀರು ಹಾಕಿ ಉದ್ಘಾಟಿಸಿದರು.
ಗಮಕ ಕಾರ್ಯಕ್ರಮದಲ್ಲಿ ಮಹಾಕವಿ ರಾಘವಾಂಕಕೃತ ಸಿದ್ಧರಾಮ ಚರಿತೆ ಮಹಾಕಾವ್ಯದಲ್ಲಿ ‘ಸೊನ್ನಲಿಗೆ ಕೆರೆ ನಿರ್ಮಾಣ’ ಭಾಗದ ವಾಚನ ವ್ಯಾಖ್ಯಾನ ಜರುಗಿತು. ಉದ್ಘಾಟನಾ ಪರ ಭಾಷಣದಲ್ಲಿ ಶ್ರೀ ಬಿ.ಕೆ. ಗೋಟ್ಯಾಳ್ “ಮಹಾಕಾವ್ಯಗಳು ಜನತೆಗೆ ಸಮಾಜಮುಖಿ ಕಾರ್ಯಕ್ರಮ ಮಾಡಲು ಮಾರ್ಗದರ್ಶನ ನೀಡಿದವು. ಕನ್ನಡದಲ್ಲಿ ಇರುವಷ್ಟು ಶ್ರೇಷ್ಠ ಮಹಾಕಾವ್ಯಗಳು ಬೇರೆ ಭಾಷೆಯಲ್ಲಿಲ್ಲ. ನಾವು ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಕಾವ್ಯಗಳ ಮೂಲಕ ನೋಡಿ ಆನಂದಿಸಬೇಕು. ಬಸವಣ್ಣನವರ ಕಾಯಕ ತತ್ವವನ್ನು 12ನೇ ಶತಮಾನದ ಸಿದ್ಧರಾಮ ಆದಿಯಾಗಿ ಎಲ್ಲ ಶರಣರಲ್ಲಿ ಕಾಣಬಹುದು” ಎಂದು ಹೇಳಿದರು.
ಗಮಕ ವಿದುಷಿ ಶಾಂತಾ ಕೌತಾಳ್ ಇವರುಗಳು ಸಿದ್ಧರಾಮನು ಸೊನ್ನಲಿಗೆ ಕೆರೆ ನಿರ್ಮಾಣವನ್ನು ಮಾಡಿದ ಬಗೆಯನ್ನು ತಮ್ಮ ಮಧುರ ಕಂಠದಿಂದ ಕಾವ್ಯ ವಾಚನ ಮಾಡಿದರು. ವ್ಯಾಖ್ಯಾನ ನೀಡಿದ ಕಲ್ಯಾಣರಾವ್ ದೇಶಪಾಂಡೆಯವರು “ಸಿದ್ಧರಾಮನು ಒಬ್ಬ ಮಹಾನ್ ಧಾರ್ಮಿಕ ಹಾಗೂ ಸಾಮಾಜಿಕ ನಾಯಕ. ಸೊನ್ನಲಿಗೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದೇವಸ್ಥಾನವನ್ನು ಜ್ಞಾನಿಗಳಾದ ಮನುಜರ ಉದ್ಧಾರಕ್ಕೆ ನಿರ್ಮಿಸಿದನು. ಅದರಂತೆ ಅಜ್ಞಾನಿಗಳಾದ ಪಶು-ಪಕ್ಷಿ, ಕ್ರಿಮಿ-ಕೀಟಕ ಇವುಗಳಿಗೆ ಮೋಕ್ಷ ದೊರಕಲು ದೊಡ್ಡದಾದ ಕೆರೆಯನ್ನು 4000 ಶಿಷ್ಯರೊಂದಿಗೆ ಕರಸೇವೆ ಮಾಡಿ ನಿರ್ಮಿಸಿದನು. ಸಿದ್ಧರಾಮನ ನಾಯಕತ್ವದಿಂದ ಎಲ್ಲ ರಾಜರು, ಭಟರು, ಅಭಿಮಾನಿಗಳು, ಸೇನಾ ನಾಯಕರು ಪ್ರಭಾವಿತರಾದರು. ಸೊನ್ನಲಿಗೆ ಕೆರೆ ನಿರ್ಮಿಸಿ ಸಿದ್ಧರಾಮನು ಸೊನ್ನಲಿಗೆಯನ್ನು ದಕ್ಷಿಣದ ಶ್ರೀಶೈಲವನ್ನಾಗಿ ಮಾಡಿದನು. ಸಾವಿರಾರು ವಚನಗಳನ್ನು ರಚಿಸಿ ವಚನಕಾರನೆನಿಸಿದನು. ಸಿದ್ಧರಾಮನು ಗೋಸೇವೆ ಮಾಡಿ ಗೋಶಾಲೆ ನಿರ್ಮಿಸಿದನು. ಅನೇಕ ಹೋಮ-ಹವನಗಳನ್ನು ಮಾಡಿದನು. ಈಗಿನ ಪರಿಕಲ್ಪನೆಯಂತೆ ಸಾಮೂಹಿಕ ವಿವಾಹಗಳನ್ನು ಮಾಡಿದನು. 21ನೇ ಶತಮಾನದ ಆದರ್ಶ ಸಮಾಜದ ಕಲ್ಪನೆಯನ್ನು 12ನೇ ಶತಮಾನದಲ್ಲಿಯೇ ಸಿದ್ಧರಾಮನು ಸಾಕಾರಗೊಳಿಸಿದನು. ಸಾಕಾರ ಮತ್ತು ನಿರಾಕಾರ ಈ ಸಿದ್ಧಾಂತವನ್ನು ಸಿದ್ಧರಾಮನು ಒಪ್ಪಿಕೊಂಡು ಅದರಂತೆ ನಡೆದನು. ಕನ್ನಡ ಜನತೆಯ ಒಬ್ಬ ಧೀಮಂತ ಧಾರ್ಮಿಕ ಮತ್ತು ಸಾಮಾಜಿಕ ನಾಯಕನಾದ ಸಿದ್ಧರಾಮನು ತನ್ನ ಜೀವನದ ಕೊನೆಗಾಲದಲ್ಲಿ ಸೊಲ್ಲಾಪುರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಹಿಂದುಗಡೆ ಇರುವ ಕಲ್ಲಿನ ಪೊಟರೆಯಲ್ಲಿ ಜೀವಂತ ಸಮಾಧಿಯಾದನು. ಹೀಗೆ ಸೊಲ್ಲಾಪುರವನ್ನು ಅಭಿನವ ಶ್ರೀಶೈಲವಾಗಿ ಮಾಡಿದ ಸಿದ್ಧರಾಮನ ಸಾಧನೆ ಅಭಿವಂದನೀಯ. ಕನ್ನಡಿಗರ ಅಭಿಮಾನಿ ನಾಯಕನಾದ ಸಿದ್ಧರಾಮನ ಕೊಡುಗೆ ಅತಿಶ್ರೇಷ್ಠವಾದುದು. ಈತನ ಸ್ಮರಣೆಗಾಗಿ ಇಂದಿಗೂ ಸಂಕ್ರಾಂತಿ ದಿನದಂದು ಸೊನ್ನಲಾಪುರದಲ್ಲಿ ಹಾಗೂ ವಿಜಯಪುರದಲ್ಲಿ ದನಗಳ ಜಾತ್ರೆ ನೆರವೇರುವುದು. ಸಿದ್ಧರಾಮನ ಸಾಧನೆಗಳು ಜಾಗತಿಕ ಮಟ್ಟದ್ದು. ಸಿದ್ಧರಾಮನು ಬರೀ ಸೊಲ್ಲಾಪುರವಲ್ಲದೇ ತುಮಕೂರು, ಮಂಡ್ಯ, ಮೈಸೂರು ಮುಂತಾದೆಡೆಗಳಲ್ಲಿ ಕೆರೆ ನಿರ್ಮಿಸಿದನು. ಕುಡ ಒಕ್ಕಲಿಗ, ಹಾಲುಮತ, ಭೋವಿ ಮುಂತಾದ ಜನಾಂಗದವರು ಸಿದ್ಧರಾಮನನ್ನು ತಮ್ಮ ಕುಲದೇವರೆಂದು ಆರಾಧಿಸುವರು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಗಮಕಿಗಳು ಕೇಳಿದ ವಿಷಯದ ಬಗೆಗಿನ 10 ಪ್ರಶ್ನೆಗಳಲ್ಲಿ 6 ಪ್ರಶ್ನೆಗಳಿಗೆ ಉತ್ತರಿಸಿದರು. ಹೀಗೆ ಶಾಲಾ ವಿದ್ಯಾರ್ಥಿಗಳಿಗೆ ಗಮಕ ಕಾರ್ಯಕ್ರಮವು ಒಂದು ಪಾಠದಂತೆ ಬಿಂಬಿತವಾಯಿತು. ಕಾರ್ಯಕ್ರಮದಲ್ಲಿ ಜೀವನದೀಪ ಶಾಲೆಯ ಮುಖ್ಯಗುರುಮಾತೆ ಶ್ರೀಮತಿ ಉಮಾ ಪಾಟೀಲ್ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಮನಗೂಳಿಯ ಪತ್ರಕರ್ತರಾದ ಶ್ರೀ ಶಿವಾಜಿ ಮೋರೆಯವರು ತಮ್ಮ ಸ್ವರಚಿತ ಕವನವನ್ನು ವಾಚಿಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು. ಅಧ್ಯಕ್ಷೀಯ ಭಾಷಣ ಮಾಡಿದ ಜೀವನದೀಪ ಶಾಲೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಮೊಗೇರಾ ಇವರುಗಳು ಗಮಕ ಕಾರ್ಯಕ್ರಮಗಳ ಮೂಲಕ ಈ ಕಲೆಯನ್ನು ಪಸರಿಸುತ್ತಿರುವ ವಿಜಯಪುರ ಜಿಲ್ಲಾ ಗಮಕ ಪರಿಷತ್ತು ಶ್ರೇಷ್ಠ ಕಾರ್ಯವನ್ನು ಮಾಡುತ್ತಿದೆ. ಇದಕ್ಕೆ ಕಾರಣೀಭೂತರಾದ ಶ್ರೀ ಬಿ.ಎಂ. ಪಾಟೀಲ್ ಹಾಗೂ ಗಮಕ ಪರಿಷತ್ತಿನ ಸದಸ್ಯರು ಹಾಗೂ ಗಮಕ ವಾಚನ ವ್ಯಾಖ್ಯಾನ ಮಾಡುತ್ತಿರುವರು ಮೂರು ವಜ್ರಗಳಿದ್ದಂತೆ ಎಂದು ವರ್ಣಿಸಿದರು.
