ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ ಮತ್ತು ಪುತ್ತೂರು ತಾಲೂಕು ಘಟಕ ಹಾಗೂ ಕರ್ನಾಟಕ ಸಂಘದ ಸಹಯೋಗದೊಂದಿಗೆ ಕುಮಾರವ್ಯಾಸ ಜಯಂತಿ ಪ್ರಯುಕ್ತ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮವನ್ನು ದಿನಾಂಕ 04 ಜನವರಿ 2026ನೇ ಭಾನುವಾರದಂದು ಪುತ್ತೂರಿನ ಅನುರಾಗ ವಠಾರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ, ಕುಮಾರವ್ಯಾಸ ಭಾರತದಿಂದ ಆಯ್ದ, ಶ್ರೀಕೃಷ್ಣ ಕಾರುಣ್ಯಕ್ಕೆ ಸಂಬಂಧಿಸಿದ ‘ಸೈಂಧವ ವಧೆ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಗಮಕಿ ಮಧೂರು ಮೋಹನ ಕಲ್ಲೂರಾಯರು ಗಮಕ ವಾಚನಗೈದರೆ, ಗಮಕ ಕಲಾ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಯುತ ರಾಮಕೃಷ್ಣ ಬಳಂಜ ಇವರು ವ್ಯಾಖ್ಯಾನವನ್ನು ನಡೆಸಿಕೊಟ್ಟರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ. ಪುರಂದರ ಭಟ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದಿನದ ಪ್ರಾಮುಖ್ಯತೆಯನ್ನು ವಿವರಿಸುತ್ತಾ, ಕುಮಾರವ್ಯಾಸರು ಒದ್ದೆ ಬಟ್ಟೆ ಉಟ್ಟುಕೊಂಡು ಗದುಗಿನ ವೀರನಾರಾಯಣದ ಸನ್ನಿಧಿಯಲ್ಲಿ ಬರೆದಂತಹ ಕಾವ್ಯವು ಓದುಗರ ಹೃದಯಾಂತರಾಳವನ್ನು ಒದ್ದೆ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಘಟಕದ ಉಪಾಧ್ಯಕ್ಷರಾದ ಪ್ರೊ. ವತ್ಸಲಾ ರಾಜ್ಞಿ ಇವರು ಮಾತನಾಡುತ್ತಾ “ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸೃಜನಶೀಲ ಸಾಹಿತ್ಯವಾಗಿ ಹಾಗೂ ಸಾರ್ವಕಾಲಿಕ ಕೃತಿಯಾಗಿ ಕುಮಾರವ್ಯಾಸರ ಕೃತಿಯು ಇಂದು ನಿಲ್ಲುತ್ತದೆ” ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಧೂರು ಮೋಹನ ಕಲ್ಲೂರಾಯರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, “ಕುಮಾರವ್ಯಾಸನ ಕೃತಿಯ ಸಂದೇಶಗಳು ನಮ್ಮ ಬದುಕಿಗೆ ಮಾರ್ಗದರ್ಶಕವಾಗಿದೆ. ಇದರಲ್ಲಿ ಬರುವ ವಿದುರ ನೀತಿಯು, ಮನುಷ್ಯನ ಮತ್ತು ಸಮಾಜದ ಸರ್ವತೋಮುಖ ಜಾಗೃತಿಯ ಕಡೆಗೆ ಬೆಳಕನ್ನು ಚೆಲ್ಲುತ್ತದೆ” ಎಂದರು.
ಶ್ರೀಯುತ ಸುಬ್ರಹ್ಮಣ್ಯ ಶರ್ಮರು ಪ್ರಾರ್ಥಿಸಿ, ಕಾರ್ಯದರ್ಶಿ ಶ್ರೀಮತಿ ಶಂಕರಿ ಶರ್ಮ ಕಲಾವಿದರನ್ನು ಪರಿಚಯಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷರಾದ ಶ್ರೀಮತಿ ಜಯಂತಿ ಹೆಬ್ಬಾರ್, ಸದಸ್ಯರಾದ ಶ್ರೀಮತಿ ಪ್ರೇಮಲತಾ ರಾವ್, ರಂಗನಾಥ ರಾವ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಅಚ್ಚುಕಟ್ಟಾಗಿ ನಡೆದ ಗಮಕ ಕಾರ್ಯಕ್ರಮವು ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು.
