ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತು ಹಾಗೂ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ ಇವರ ಸಹಯೋಗದಲ್ಲಿ ಕುಮಾರವ್ಯಾಸ ಜಯಂತಿ ಪ್ರಯುಕ್ತ ‘ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ’ವು ದಿನಾಂಕ 17 ಫೆಬ್ರವರಿ 2025ರಂದು ವಿಜಯಪುರದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಹಿರಿಯ ಸಾಹಿತಿ ಸಂಶೋಧಕ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಮಾತನಾಡಿ “ಗಮಕ ಕಲೆ ಪ್ರಾಚೀನ ಕಾಲದಿಂದಲೂ ಬಂದಿರುವಂತಹದು. ಕಾವ್ಯಗಳನ್ನು ರಾಗ, ಶ್ರುತಿ. ಬದ್ಧವಾಗಿ ವಾಚನ ಮಾಡುವ ಕಲೆ ಕನ್ನಡಕ್ಕಿದೆ. ಕಾವ್ಯದ ಅರ್ಥ, ಭಾವ, ನವರಸಗಳಿಗೆ ಪ್ರಾಧಾನ್ಯತೆ ಕೊಟ್ಟು ರಸ ಭಾವ ಕೆಡದಂತೆ ಶ್ರೋತೃಗಳಿಗೆ ರಸಗ್ರಹಣ ಮಾಡುವುದೇ ಗಮಕವಾಚನ ಉದ್ದೇಶವಾಗಿದೆ” ಎಂದು ಪ್ರೇಕ್ಷಕರನ್ನು ಗಮನದಲ್ಲಿಟ್ಟು ಗಮಕ ಸಾಹಿತ್ಯದ ಮೌಲ್ಯವನ್ನು ಎತ್ತಿ ಹೇಳಿದರು. ಮಾತನಾಡಿದರು.
“ಗಮಕ ಕಲೆ ಒಂದೆರಡು ದಿನದಲ್ಲಿ ಕರಗತವಾಗುವದಿಲ್ಲ. ಅದು ನಿರಂತರವಾಗಿ ರೂಢಿಯಾಗಬೇಕು ಮತ್ತು ಅಷ್ಟೇ ಹಂಬಲವಿರಬೇಕು ಅಂದಾಗ ಮಾತ್ರ ಶೋತೃಗಳ ಹೃದಯ ಗೆಲ್ಲಲು ಸಾಧ್ಯ” ಎಂದು ಪ್ರಾಧ್ಯಾಪಕ ಡಾ. ಉಷಾದೇವಿ ಹಿರೇಮಠ ಅತಿಥಿ ಸ್ಥಾನದಿಂದ ಮಾತನಾಡಿದರು. ಡಾ. ಎಂ.ಎಸ್. ಮದಭಾವಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ಪುಷ್ಪಾ ಕುಲಕರ್ಣಿಯವರು ಮಧುರವಾಗಿ, ಸ್ಪಷ್ಟವಾಗಿ, ರಾಗಬದ್ಧವಾಗಿ ಗಮಕ ವಾಚನ ಮಾಡಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಅರ್ಥಪೂರ್ಣವಾಗಿ ಶ್ರೀ ಕಲ್ಯಾಣರಾವ್ ದೇಶಪಾಂಡೆ ಗಮಕಿಗಳು ಚೆನ್ನಾಗಿ ವ್ಯಾಖ್ಯಾನವನ್ನು ಮಾಡಿದರು.
ಪ್ರಾರ್ಥನೆಯನ್ನು ಜಿಲ್ಲಾ ಗಮಕ ಸಾಹಿತ್ಯದ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲ ಇವರು ಹಾಗೂ ಕಾರ್ಯಕ್ರಮವನ್ನು ಶ್ರೀ ಬಿ.ಕೆ. ಗೋಟ್ಯಾಳ ನಿರೂಪಿಸಿ, ಡಾ. ವಿ.ಡಿ. ಐಹೊಳ್ಳಿ ವಂದಿಸಿ, ಜಂಬುನಾಥ ಕಂಚ್ಯಾಣಿಯವರು ಅತಿಥಿ ಪರಿಚಯಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅರವಿಂದ ಕಂಚ್ಯಾಣಿ, ಪಿ.ಸಿ. ಕುಲಕರ್ಣಿ, ಅಶೋಕ ತಂಗಾ, ಬಿ.ಎಸ್. ಕಟ್ಟಿ, ಎಸ್.ಎಸ್. ಚಿನಿವಾರ, ಪಿ.ಎಂ. ಪೂಜಾರಿ, ಎಸ್.ಎಂ. ಜೇವರಗಿ, ಮಹೇಶ ದೊಡ್ತಿ ಮುಂತಾದವರು ಉಪಸ್ಥಿತರಿದ್ದರು.