ಕೋಟ : ಮಣೂರು ಪಡುಕೆರೆ ಶಾಲಾ ಆವರಣದಲ್ಲಿ ದಿನಾಂಕ 08 ಫೆಬ್ರವರಿ 2026ರಂದು ಇಂಡಿಕಾ ಕಲಾ ಬಳಗ ಆಯೋಜಿಸಿದ ‘ಸಂಭ್ರಮ-2026’ ಕಾರ್ಯಕ್ರಮದಡಿಯಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರಿಂದ ‘ಗಾನ ವೈಭವ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡಿಕಾ ಕಲಾ ಬಳಗದ ಅಧ್ಯಕ್ಷರಾದ ಜಯರಾಮ ಶೆಟ್ಟಿ ಇವರು ಮಾತನಾಡಿ “ಗಣಪತಿ ಸ್ತುತಿಯೊಂದಿಗೆ ಆರಂಭಿಸಲಾಗುವ ಗಾನ ವೈಭವ ಸಾಂಸ್ಕೃತಿಕ ಕಾರ್ಯಕ್ರಮದ ಆರಂಭಕ್ಕೆ ಅತ್ಯಂತ ಸೂಕ್ತ. ಪ್ರತಿಭಾನ್ವಿತ ತಂಡದ ಗಾನ ವೈಭವ ಕಾರ್ಯಕ್ರಮದ ಕಳೆಗಟ್ಟಿತು. ತಂಡದ ಪ್ರಶಾಂತ್ ಪಡುಕೆರೆ ಚುರುಕುತನದಿಂದಲೇ ಯಕ್ಷಗಾನ, ಭಜನೆ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾ ಪ್ರಬುದ್ಧ ಕಲಾವಿದರೆನಿಸಿಕೊಂಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಪ್ರಶಾಂತ್ ಪಡುಕೆರೆ ಇವರನ್ನು ಗೌರವಿಸಲಾಯಿತು. ಪಂಚಮಿ ವೈದ್ಯ, ಸುದೀಪ ಉರಾಳ, ರಾಹುಲ್ ಅಮೀನ್, ಕಿಶನ್ ಪೂಜಾರಿ, ಪವನ್ ಆಚಾರ್, ಪರಿಣಿತ ವೈದ್ಯ ಇವರುಗಳು ಉಪಸ್ಥಿತರಿದ್ದರು.
