ಮಂಗಳೂರು : ಸಾಹಿತಿ ಎಂ.ಜಿ. ಹೆಗಡೆ ಇವರ ‘ಮಿನುಗು ನೋಟ-ಗಾಂಧಿ ಕುರಿತ ಪ್ರಶ್ನೆ-ಉತ್ತರ’ ಕೃತಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ‘ಗಾಂಧಿ ಸಾಹಿತ್ಯ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಸರ್ವೋದಯ ದಿನಾಚರಣೆ ಅಂಗವಾಗಿ ದಿನಾಂಕ 30 ಜನವರಿ 2026ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಎಂ.ಸಿ. ನರೇಂದ್ರ ತಿಳಿಸಿದ್ದಾರೆ.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಂ.ಜಿ. ಹೆಗಡೆ ವಿಮರ್ಶಕ, ಪುಸ್ತಕಗಳ ಸಂಪಾದಕ ಮತ್ತು ತಾಳಮದ್ದಲೆಯ ಅರ್ಥಧಾರಿ. ನಾಲ್ಕು ನಾಟಕಗಳನ್ನು ಬರೆದಿದ್ದಾರೆ. ‘ಗೌರೀಶ್ ಕಾಯ್ಕಿಣಿ’, ‘And Where Shall I Roost’ ಇವರ ಪ್ರಕಟಿತ ಪುಸ್ತಕಗಳಾಗಿವೆ. ಅವರು ಕೆಲಕಾಲ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ನಿರ್ದೇಶಕರಾಗಿಯೂ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಅವರು ಸಂಪಾದಿಸಿದ ಮುಖ್ಯ ಪುಸ್ತಕಗಳು ‘ಸಹಯಾನ’, ‘ಕಟಾಂಜನ’, ‘ಅಮೃತಬಿಂದು’, ‘ಗೌರೀಶರ ಅತ್ಯುತ್ತಮ ಬರಹಗಳು’, ‘ಸಮುದಾಯದ ಗಾಂಧಿ’.
