ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯನ್ನು ಮಡಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 25 ಜನವರಿ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕುಶಾಲನಗರದ ಚಿತ್ರಕಲಾವಿದ ಉ.ರಾ. ನಾಗೇಶ್ ಇವರು ಕಥಾ ಸ್ಪರ್ಧಿಗಳಿಗೆ ಕತೆ ರಚನೆ ಮಾಡುವ ಕುರಿತು ಮಾತನಾಡುತ್ತಾ “ಕಥೆ ರಚಿಸುವ ಸಂದರ್ಭದಲ್ಲಿ ಕಥೆಗಾರ ಆ ಪಾತ್ರದ ಒಳಹೊಕ್ಕು ಕಥೆಯನ್ನು ನಿರೂಪಿಸಬೇಕು. ಪ್ರತಿಯೊಂದು ಸಣ್ಣ ಘಟನೆಯನ್ನು ವಿಶ್ಲೇಷಣೆ ಮಾಡುವ ಮೂಲಕ ಕಥೆ ರಚನೆ ಮಾಡಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಓದಿರುವ ಮತ್ತು ಕೇಳಿರುವ ವಿಚಾರಗಳನ್ನು ಸಂಕ್ಷಿಪ್ತವಾಗಿ ಬರೆಯುವ ಮೂಲಕ ಕಥೆ ರಚನೆ ಮಾಡಬಹುದು. ಕಥೆ ರಚನೆ ಮಾಡುವ ಸಂದರ್ಭದಲ್ಲಿ ಪಾತ್ರಗಳ ವಿಚಾರವಾಗಿ ಸರಿಯಾದ ವಿವರಗಳನ್ನು ನೀಡಬೇಕು” ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿ ಎಂ. ಕೃಷ್ಣಪ್ಪನವರು ಮಾತನಾಡುತ್ತಾ “ನಾಳಿನ ನೂತನ ಸಾಹಿತಿಗಳನ್ನು ತಯಾರು ಮಾಡುವಲ್ಲಿ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ. ಕಥಾ ಸ್ಪರ್ಧೆ ಏರ್ಪಡಿಸುವ ಮೂಲಕ ಅವರಿಗೆ ಸಾಹಿತ್ಯದ ಅರಿವು ಮೂಡಿಸುತ್ತಿರುವುದು ಸಂತಸದ ವಿಚಾರ” ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಅವರು ಮಾತನಾಡಿ “ಕೊಡಗಿನ ಗೌರಮ್ಮ ಕನ್ನಡದ ಪ್ರಥಮ ಕಥೆಗಾರ್ತಿ. ಸಣ್ಣ ಸಣ್ಣ ಕಥೆಗಳನ್ನು ಬರೆಯುವ ಮೂಲಕ ಪ್ರಖ್ಯಾತಿ ಪಡೆದವರು. ಕಥೆಗಾರ್ತಿ ಮಾತ್ರವಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹಣ ಸಂಗ್ರಹದ ನಿಮಿತ್ತ ಕೊಡಗಿಗೆ ಬಂದಿದ್ದ ಮಹಾತ್ಮ ಗಾಂಧಿಯವರಿಗೆ ತಮ್ಮ ಮೈ ಮೇಲಿನ ಚಿನ್ನಾಭರಣವನ್ನು ನೀಡುವುದರ ಮೂಲಕ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿಯೂ ಗೌರಮ್ಮ ಹೆಸರು ಮಾಡಿದ್ದಾರೆ. ಅವರ ಪುತ್ರ ಬಿ.ಜೆ. ವಸಂತರು ಕೊಡಗಿನ ಗೌರಮ್ಮರ ಹೆಸರಿನಲ್ಲಿ ಎರಡು ದತ್ತಿಗಳನ್ನು ಸ್ಥಾಪನೆ ಮಾಡಿ ಈಗಾಗಲೇ 19 ಪ್ರಶಸ್ತಿಗಳನ್ನು ಕೊಡಲಾಗಿದೆ. ವಿದ್ಯಾರ್ಥಿಗಳಲ್ಲಿ ಕಥೆಯ ಆಸಕ್ತಿ ಬಿತ್ತುವ ಸಲುವಾಗಿ ಅವರಿಗೂ ಕೂಡ ಪ್ರತ್ಯೇಕ ದತ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳನ್ನು ಸಾಹಿತ್ಯಿಕವಾಗಿ ಬೆಳೆಸುವ ದೃಷ್ಠಿಯಿಂದ ಕಥೆ ರಚನೆಯಂತಹ ಸ್ಪರ್ಧೆಗಳನ್ನು ಏರ್ಪಡಸುತ್ತಾ ಬರುತ್ತಿದೆ” ಎಂದರು.
30 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮದ್ ಹಾಗೂ ಶ್ರೀಮತಿ ರೇವತಿ ರಮೇಶ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎನ್. ಜಗದೀಶ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೆಚ್.ಕೆ. ಸುಶೀಲ, ಶಿಕ್ಷಕಿ ಜಯಮ್ಮ ಸೇರಿದಂತೆ ವಿವಿಧ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.