ಉಡುಪಿ : ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು (ರಿ.) ಉಡುಪಿ ಮತ್ತು ತಾಲ್ಲೂರು ತೋರಣ ಯೋಜನೆಯ ಭಾಗವಾದ ‘ಕರಾವಳಿ ಕಟ್ಟು’ ಇವರ ಆಶ್ರಯದಲ್ಲಿ ‘ನಿರ್ದಿಂಗತ’ ರಂಗ ತಂಡದಿಂದ ಕಥೆ, ಕವನ, ಕಾದಂಬರಿ, ನಾಟಕ ಹಾಗೂ ರಂಗರೂಪಕ ‘ಗಾಯಗಳು’ ಇದರ ಪ್ರದರ್ಶನ ದಿನಾಂಕ 23-09-2023ರ ಶನಿವಾರ ಸಂಜೆ ಗಂಟೆ 6.30ಕ್ಕೆ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಡಾ. ಶ್ರೀಪಾದ್ ಭಟ್ ನಿರ್ದೇಶನದ ಈ ನಾಟಕಕ್ಕೆ ಶ್ವೇತಾ ರಾಣಿ ಸಹ ನಿರ್ದೇಶಕಿಯಾಗಿ ಸಹಕರಿಸಿದ್ದಾರೆ.
ನಾಟಕದ ಕುರಿತು :
ಇಡೀಯ ಜಗತ್ತು ಯುದ್ಧೋನ್ಮದದಲ್ಲಿ ನರಳುತ್ತಿದೆ. ರಾಜಕಾರಣಿಗಳ, ಧರ್ಮ ಗುರುಗಳ ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿ ಮ್ಯಾಕ್ ಬೆತ್ ನ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳು ಕತ್ತರಿಸುತ್ತಿವೆ. ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೆ ನಮಗೆ ಬಿಡುಗಡೆ ಇಲ್ಲ. ಈ ನೆಲದ ತುಂಬಾ ಅಂಥ ಅಸಂಖ್ಯಾತ ಗಾಯಗಳ ಕಥೆಗಳಿವೆ. ಅವುಗಳಿಂದ ಯುದ್ಧ ಹಾಗೂ ಕೋಮು ಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸುತ್ತಿದ್ದೇವೆ ಮತ್ತು ಈ ರಂಗಚಿತ್ರ ಸಹಜವಾಗಿಯೇ ಮಹಿಳೆಯರ ನೋವಿನ ಸೊಲ್ಲುಗಳಾಗಿ ಪರಿಣಮಿಸಿವೆ. ಇದರಲ್ಲಿ ನಮ್ಮಿಂದ ಎಣಿಸಲಾಗದಷ್ಟು ಗಾಯದ ಕಥೆಗಳಿವೆ, ಎಣಿಸಲಾಗದ ಅಸಂಖ್ಯ ಕಥೆಗಳ ಬಗೆಗೂ ಸಹಾನುಭೂತಿ ಸಂತಾಪಗಳಿವೆ. ರಂಗಭೂಮಿಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಲೆತ್ನಿಸುತ್ತಿರುವ ರಂಗ ವಿದ್ಯಾರ್ಥಿಗಳ ಕಲಿಕಾ ಪಠ್ಯವಾಗಿಯೂ ಇದನ್ನು ಪ್ರಯೋಗಿಸಲಾಗುತ್ತಿದೆ. ಇಲ್ಲಿ ಕಥೆಗಳಿವೆ, ಕವನಗಳಿವೆ ನಾಟಕದ ಭಾಗಗಳಿವೆ, ಕಾದಂಬರಿಯ ಪುಟಗಳಿವೆ.
ಸಮಕಾಲಿನ ಸಂದರ್ಭದಲ್ಲಿ ಈ ನಾಟಕ ಅತ್ಯಂತ ಮಹತ್ವ ಪಡೆದು ಕೊಳ್ಳುತ್ತದೆ. ಈ ನಾಟಕಕ್ಕೆ ತಮಗೆಲ್ಲಾ ರಥಬೀದಿ ಗೆಳೆಯರ ಆತ್ಮೀಯ ಆಮಂತ್ರಣವಿದೆ.