ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ಎಚ್. ಎಸ್. ವೆಂಕಟೇಶ್‌ಮೂರ್ತಿ ಇವರಿಗೆ 80ರ ಹುಟ್ಟುಹಬ್ಬದ ಅಭಿನಂದನೆ – ಗೀತ ಗೌರವ ಹಾಗೂ ಕವಿ ಚನ್ನವೀರ ಕಣವಿ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 08-07-2024ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇದರ ವಾಡಿಯಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ “ಕನ್ನಡದಲ್ಲಿ ಹಲವು ಸಮನ್ವಯ ಕವಿಗಳಿದ್ದರೆ ಅವರಲ್ಲಿ ಚನ್ನವೀರ ಕಣವಿ ಕೂಡ ಒಬ್ಬರು. ಕನ್ನಡ ಸಾಹಿತ್ಯ ಇಂದಿನವರೆಗೂ ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆಯಾದರೆ ಅದು ನಮ್ಮ ಕವಿ ಮಹಾಶಯರ ಕೊಡುಗೆ. ಕೆಲವು ಪ್ರಮುಖ ಕವಿಗಳಿಗೆ ಜ್ಞಾನಪೀಠ ಸಿಗಬೇಕಾಗಿತ್ತು. ಎಲ್ಲಾ ಸಂಸ್ಕೃತಿ, ತತ್ತ್ವ ಸಿದ್ಧಾಂತಗಳ ಸಾರವನ್ನು ಹೀರಿಕೊಂಡು ತಮ್ಮ ಕಾಲಗಳಲ್ಲಿ ಒಡಮೂಡಿಸಿದ ಕೀರ್ತಿ ಚನ್ನವೀರ ಕಣವಿ ಅವರಿಗೆ ಸಲ್ಲುತ್ತದೆ. ಕಣವಿ ಅವರ ಒಟ್ಟಾರೆ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಅವರು ಯಾವುದಕ್ಕೂ ಕಟ್ಟು ಬಿದ್ದವರಲ್ಲ ಎಂಬುದನ್ನು ತೋರಿಸುತ್ತದೆ.“ ಎಂದು ಹೇಳಿದರು.
ನಾಟಕಕಾರ ಡಾ. ನಾ. ದಾಮೋದರ ಶೆಟ್ಟಿ ಮಾತನಾಡಿ “ಎಚ್. ಎಸ್. ವೆಂಕಟೇಶ್‌ಮೂರ್ತಿ ಅವರ ಕಾವ್ಯ ವೈಖರಿಯನ್ನು ಗಮನಿಸಿದ್ದಲ್ಲಿ ಯಾವುದೇ ಸಂದರ್ಭದಲ್ಲೂ ಏಳುಬೀಳುಗಳನ್ನು ಕಾಣಲು ಸಾಧ್ಯವಿಲ್ಲ. ಇವರ ಒಟ್ಟಾರೆ ಸಾಹಿತ್ಯದ ಸಾಧನೆ ಬಗ್ಗೆ ಹೇಳುವುದಾದರೆ ಇವರು ಒಬ್ಬ ಶೇಷ್ಠ ಮಹಾಕವಿ ಎಂದು ಸೂಚಿಸ ಬಹುದು.” ಎಂದರು. ವೈ. ಕೆ. ಮುದ್ದುಕೃಷ್ಣ, ಬಿ. ಆರ್. ಲಕ್ಷ್ಮಣ್ ರಾವ್ ಹಾಗೂ ಟಿ. ಎನ್. ಸೀತಾರಾಮ್ ಉಪಸ್ಥಿತರಿದ್ದರು.