ಕಾಸರಗೋಡು : ಕಾಸರಗೋಡಿನ ಖ್ಯಾತ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿ ಏರ್ಪಡಿಸಿದ ‘ಗೆಜ್ಜೆ ತರಂಗ’ ಕಾರ್ಯಕ್ರಮವು ದಿನಾಂಕ 09-06-2024ರಂದು ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಖ್ಯಾತ ನೃತ್ಯ ಗುರುಗಳಾದ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ “ಶಾಸ್ತ್ರೀಯ ನೃತ್ಯವನ್ನು ಕಲಿಯುವುದರಿಂದ ಮಾನಸಿಕವಾಗಿ ದೈಹಿಕವಾಗಿ ಅದು ನಮ್ಮನ್ನು ಗಟ್ಟಿ ಗೊಳಿಸುತ್ತದೆ. ತಪಸ್ಸು ಮಾಡಿದಂತೆ ನಿರಂತರ ಅಭ್ಯಾಸದಿಂದ ಮಾತ್ರ ಅದನ್ನು ಒಲಿಸಿಕೊಳ್ಳಬಹುದು. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಗಳೇ ಇಲ್ಲದ ಕಾಲಘಟ್ಟದಲ್ಲಿ ರಂಗ ಚಿನ್ನಾರಿ ಏರ್ಪಡಿಸುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇನ್ನೊಬ್ಬರಿಗೆ ಅನುಕರಣೀಯ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ನೃತ್ಯ ಗುರುಗಳಾದ ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಇವರು “ಸಾವಿರಾರು ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯವನ್ನು ಕಲಿಯುತ್ತಿದ್ದರೂ ಅದು ಕೇವಲ ಸ್ಪರ್ಧೆಗೆ ಮಾತ್ರ ಸೀಮಿತಗೊಳ್ಳಲಾರದು. ಕಲೆ ಯಾವತ್ತೂ ಕೈ ಬಿಡೋದಿಲ್ಲ” ಎಂದರು.
ನಾರಿ ಚಿನ್ನಾರಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಐ. ಭಟ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಭರತನಾಟ್ಯವನ್ನು ಕುಮಾರಿ ಯಶ್ನಾ ಬಿ. ನಾಯ್ಕ್ ಮತ್ತು ಕುಮಾರಿ ಶಾನ್ವಿ ಕೆ., ಮೋಹಿನಿಯಾಟಂ ಕುಮಾರಿ ಕೃಷ್ಣಪ್ರಭಾ ಪಿಳ್ಳೈ, ಜಾನಪದ ನೃತ್ಯ ಕುಮಾರಿ ದ್ರುವಿತಾ ಸಿ.ಎಸ್., ಕೂಚುಪುಡಿ ನೃತ್ಯವನ್ನು ಕುಮಾರಿ ಕೃಷ್ಣೇಂದು, ಕೇರಳ ನಟನಂ ಕುಮಾರಿ ಶಿವಾನಿ ಕೂಡ್ಲು ಹಾಗೂ ಯಕ್ಷಗಾನ ನೃತ್ಯವನ್ನು ಕುಮಾರಿ ಗೀತಪ್ರಿಯ ಡಿ. ಮತ್ತು ಕುಮಾರಿ ತೃಷಾ ಕೆ. ಪ್ರದರ್ಶಿಸಿದರು.
ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ ಈ ಕಾರ್ಯಕ್ರಮವು ಕಾಸರಗೋಡಿನ ಪ್ರತಿಭಾನ್ವಿತ ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಕ್ಕಂತಾಗಿದೆ. ನೃತ್ಯ ಪ್ರತಿಭೆಗಳನ್ನು ಒಗ್ಗೂಡಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದ ಕಿರಣ್ ಪ್ರಸಾದ ಕೂಡ್ಲು ಇವರನ್ನು ಅಭಿವಂದಿಸಿ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಲಾಯಿತು. ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಇವರು ನೃತ್ಯ ಗುರುಗಳಾದ ಸುರೇಂದ್ರನ್ ಪಟ್ಟೇನ್ ಮತ್ತು ವಿದುಷಿ ವಿದ್ಯಾಲಕ್ಷ್ಮೀ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ನಾರಿ ಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಸರಗೋಡು ಚಿನ್ನಾ ಸ್ವಾಗತಿಸಿ, ನಾರಿ ಚಿನ್ನಾರಿಯ ಶ್ರೀಮತಿ ಸೂರ್ಯಕುಮಾರಿ ವಂದಿಸಿದರು. ನೃತ್ಯ ಪ್ರದರ್ಶನ ನೀಡಿದ ಉದಯೋನ್ಮುಖ ಪ್ರತಿಭೆಗಳಿಗೆ ನಾರಿ ಚಿನ್ನಾರಿಯ ಸ್ಮರಣಿಕೆಯನ್ನು ನೀಡಿ ಪ್ರೋತ್ಸಾಹಿಸಲಾಯಿತು.