ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಗಳನ್ನು ಸಾಮುದಾಯಿಕವಾಗಿ ಒಗ್ಗೂಡಿಸುವ ಸಲುವಾಗಿ ಆರಂಭಗೊಂಡಿರುವ ಗಿಳಿವಿಂಡು (ರಿ.) ವಿವಿಧ ಯೋಜನೆಗಳನ್ನು ಹಮ್ಮಿಗೊಂಡಿದೆ. ಈಗಾಗಲೇ ಮೂರು ಸಮಾವೇಶಗಳನ್ನು ನಡೆಸಿದ್ದು ನಾಲ್ಕನೇ ಸಮಾವೇಶವು ದಿನಾಂಕ 09 ನವೆಂಬರ್ 2025ರಂದು ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ ಎಂದು ಗಿಳಿವಿಂಡಿನ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ನುಡಿದರು. ಅವರು ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
1968ರಲ್ಲಿ ಆರಂಭಗೊಂಡು 1979ರವರೆಗಿನ ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಮತ್ತು 1980ರಲ್ಲಿ ಆರಂಭಗೊಂಡ ಮಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಎಂ.ಎ., ಎಂ.ಫಿಲ್. ಮತ್ತು ಪಿ.ಎಚ್.ಡಿ. ವಿದ್ಯಾರ್ಥಿಗಳು ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ಸಿಬಂದಿಗಳನ್ನು ಒಳಗೊಂಡಿರುವ ಗಿಳಿವಿಂಡಿನ ಸುಮಾರು ಐನೂರು ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10-00 ಗಂಟೆಗೆ ವಿಭಾಗದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ಪಂಪ ಪ್ರಶಸ್ತಿ ಪುರಸ್ಕೃತರು ಮತ್ತು ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಆಗಮಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡ ವಿಭಾಗದ ಪ್ರಾಧ್ಯಾಪಕರಿಗೆ ಈ ಸಂದರ್ಭದಲ್ಲಿ ಅಭಿವಂದನೆ ಸಲ್ಲಿಸಲಾಗುವುದು. ಗಿಳಿವಿಂಡು ಕಲರವದಲ್ಲಿ ಡಾ. ಸಬಿತಾ ಬನ್ನಾಡಿ ಕನ್ನಡ ಚಿಂತನೆ ನಡೆಸಲಿದ್ದಾರೆ. ಗಿಳಿವಿಂಡು ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರೊ. ತಾಳ್ತಜೆ ವಸಂತಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕುಲಸಚಿವ ಕೆ. ರಾಜು ಮೊಗವೀರ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಹಾಗೂ ಗಿಳಿವಿಂಡಿನ ಕಾರ್ಯದರ್ಶಿ ಪ್ರೊ. ನಾಗಪ್ಪ ಗೌಡ ಆರ್. ಮಾತನಾಡಿ “ಗಿಳಿವಿಂಡು ಕನ್ನಡ ವಿಭಾಗದ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಕನ್ನಡ ನಾಡು ನುಡಿಯ ಕುರಿತು ಚಿಂತನೆಗಳು ನಡೆಯಲಿವೆ” ಎಂದರು. ಗಿಳಿವಿಂಡಿನ ಜೊತೆ ಕಾರ್ಯದರ್ಶಿಗಳಾದ ಡಾ. ಆರ್. ನರಸಿಂಹಮೂರ್ತಿ, ಡಾ. ವಾಸುದೇವ ಬೆಳ್ಳೆ, ಸದಸ್ಯ ಡಾ. ಇಸ್ಮಾಯಿಲ್ ಉಪಸ್ಥಿತರಿದ್ದರು. ಸದಸ್ಯ ಕೃಷ್ಣ ಮೂರ್ತಿ ಸ್ವಾಗತಿಸಿದರು.

