25 ಮಾರ್ಚ್ 2023, ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಶನಿವಾರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ 137ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಗೋವಿಂದ ಪೈಯವರ ವ್ಯಕ್ತಿತ್ವ ಮತ್ತು ಮನೋಭಾವ ಎಂಬ ವಿಷಯದಲ್ಲಿ ಹಂಪಿ ಕನ್ನಡ ವಿವಿಯ ನಿವೃತ ಕನ್ನಡ ಮುಖ್ಯಸ್ಥ ಪ್ರೊ.ಎ.ವಿ. ನಾವಡ
ವಿಶೇಷೋಪನ್ಯಾಸ ನೀಡಿ ಮಾತನಾಡುತ್ತಾ ‘ ಕನ್ನಡದ ಪ್ರಥಮ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಯವರ ಒಂದೊಂದು ಕೃತಿಗಳೂ ಅಧ್ಯಯನ ಯೋಗ್ಯವಾಗಿವೆ. ಆದರೆ ಸಾಕಷ್ಟು ಅಧ್ಯಯನ ಈವರೆಗೆ ನಡೆದಿಲ್ಲ. ವಿದ್ವತ್ ಮತ್ತು ಸಾಹಿತ್ಯ ಶ್ರೀಮಂತಿಕೆಯಲ್ಲಿ ಗೋವಿಂದ ಪೈಯವರನ್ನು ಮೀರಿಸುವ ಮತ್ತೊಬ್ಬ ವ್ಯಕ್ತಿ ರಾಷ್ಟ್ರದಲ್ಲೇ ಇಲ್ಲ . ಮಂಜೇಶ್ವರ ಪ್ರದೇಶಕ್ಕೆ ಅಂದೊಂದು ಕಾಲದಲ್ಲಿ ಆಗಮಿಸುತ್ತಿದ್ದ ನೂರಾರು ಅಭಿಮಾನಿಗಳು ಎರಡು ಸಾಗರಗಳನ್ನು ನೋಡಿ ಪುಳಕಿತರಾಗುತ್ತಿದ್ದರು. ಒಂದೆಡೆ ಭೋರ್ಗರೆಯುವ ಅರಬ್ಬೀ ಸಮುದ್ರ ಹಾಗೂ ಸಾಗರದಷ್ಟೇ ಜ್ಞಾನ ಕಡಲಾದ ಗೋವಿಂದ ಪೈಯವರು ಇನ್ನೊಂದೆಡೆ. ಅವರು ಕನ್ನಡ ಸಾರಸ್ವತ ಲೋಕದ ಬೆಳಗುವ ನಕ್ಷ ತ್ರವಾಗಿದ್ದರು’ ಎಂದರು. ಕನ್ನಡ ಸಾಹಿತ್ಯ ರಚನೆಗಳ ಪ್ರಾಸಗಳನ್ನು ಬಿಟ್ಟು ಹೊಸತನದ ಕಾವ್ಯ ಸೃಷ್ಟಿಗೆ ತೀವ್ರ ವಿರೋಧಗಳ ನಡುವೆಯೂ ಹೊಸ ಭಾಷ್ಯ ಬರೆದ ಗೋವಿಂದ ಪೈಯವರ ಸಮಗ್ರ ಸಾಹಿತ್ಯ, ಸಂಶೋಧನೆಗಳ ಹಸ್ತಪ್ರತಿಗಳ ಪ್ರತಿಗಳನ್ನು ಸಂರಕ್ಷಿಸುವಲ್ಲಿ ಸ್ಮಾರಕ ಕೇಂದ್ರ ಗಿಳಿವಿಂಡಿನಲ್ಲಿ ಅಗತ್ಯ ಕ್ರಮಗಳಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಮೂಡುಬಿದಿರೆ ಕಾಲೇಜಿನ ಉಪನ್ಯಾಸಕ, ಲೇಖಕ, ವಿಮರ್ಶಕ ಟಿ.ಎನ್.ಎ. ಖಂಡಿಗೆ ಮಾತನಾಡಿ, ‘ ಈ ಸಂದರ್ಭ ಗೋವಿಂದ ಪೈಯವರ ಒಂದು ಕವಿತೆಯಾಸ್ವಾದನೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ, ಜಲ ಶೋಧದ ಸೂಕ್ಷ್ಮತೆಯಂತೆ ಮಾನವೀಯ ಮೌಲ್ಯಗಳ ಶೋಧನೆ ಗೋವಿಂದ ಪೈಯವರ ಬರವಣಿಗೆಯ ಲಕ್ಷಣವಾಗಿ ಸಾರ್ವಕಾಲಿಕ ಮೌಲ್ಯಗಳಿಂದ ಕೂಡಿದೆ ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ, ಸಾಹಿತಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯ ಡಾ. ರಮಾನಂದ ಬನಾರಿ ಮಾತನಾಡಿ, ‘ ಸಾರ್ವಕಾಲಿಕತೆ ಮತ್ತು ತಾತ್ಕಾಲಿಕತೆಯ ಮಧ್ಯೆ ಸಮನ್ವಯ ಸಾಧಿಸಿದ ಭೀಮ ವ್ಯಕ್ತಿತ್ವದ ಗೋವಿಂದ ಪೈಗಳು ವಿಶ್ವ ಕವಿತ್ವದ ಮಹಾ ಕವಿ ತಿಲಕರಾಗಿದ್ದರು’ ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಕಾಸರಗೋಡಿನ ಗಾನ ಮಂಜೂಷ ಬಳಗದ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ಜ್ಯೋಸ್ನ್ಸಾ ಎಂ. ಕಡಂದೇಲು, ರಮ್ಯಾ ಅಂಬಕಾನ, ಶ್ರದ್ಧಾ ನಾಯರ್ಪಳ್ಳ, ಪ್ರಭಾವತಿ ಕೆದಿಲಾಯ, ದಿವ್ಯಶ್ರೀ ಪೆರಡಾಲ ಅವರಿಂದ ‘ ಕಾವ್ಯ ಗಾನ ಯಾನ ’ ನಡೆದು ಜನರನ್ನು ರಂಜಿಸಿತು.
ಗೋವಿಂದ ಪೈಯವರ ಪೀಳಿಗೆಯವರಾದ ಮಣೇಲ್ ವಾಮನ ನಾಯಕ್ ಹಾಗೂ ಮಿಜಾರು ಸುರೇಶ್ ಪೈ ಅವರು ಗಿಳಿವಿಂಡಿಗೆ ಉದಾರವಾಗಿ ಕೊಡಮಾಡಿದ ಧ್ವನಿವರ್ಧಕ ವ್ಯವಸ್ಥೆಯನ್ನು ಈ ಸಂದರ್ಭ ಹಸ್ತಾಂತರಿಸಿದರು. ಸ್ಮಾರಕ ಗಿಳಿವಿಂಡಿನ ಟ್ರಸ್ಟಿ ಜಯಾನಂದ ಕೆ.ಆರ್.ಮತ್ತು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಆಡಳಿತಾಧಿಕಾರಿ ಡಾ. ಕೆ. ಕಮಲಾಕ್ಷ ಉಪಸ್ಥಿತರಿದ್ದರು. ಕವಿಗಳಾದ ಶ್ರೀಕೃಷ್ಣಯ್ಯ ಅನಂತಪುರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸುಭಾಶ್ಚಂದ್ರ ಕಣ್ವತೀರ್ಥ ಹಾಗೂ ಪುರುಷೋತ್ತಮ ಭಟ್ ಸ್ವರಚಿತ ಕವನಗಳನ್ನು ವಾಚಿಸಿದರು. ಸ್ಮಾರಕ ಟ್ರಸ್ಟ್ ಸದಸ್ಯ ಸುಭಾಶ್ಚಂದ್ರ ಕಣ್ವತೀರ್ಥ ಪ್ರಾಸ್ತಾವಿಕವಾಗಿ ಮಾತನಾಡಿ, ಹರೀಶ್ ಸುಲಾಯ ಒಡ್ಡಂಬೆಟ್ಟು ಕಾರ್ಯಕ್ರಮ ನಿರೂಪಿಸಿದರು.