ಬೆಂಗಳೂರು: ʻಕನ್ನಡ ಚಳುವಳಿ ವೀರಸೇನಾನಿ ಮ. ರಾಮಮೂರ್ತಿ ದತ್ತಿʼ ಪ್ರಶಸ್ತಿಗೆ ಕನ್ನಡ ಪರ ಹೋರಾಟಗಾರ ಹಿರಿಯ ಕಲಾವಿದರಾದ ಶ್ರೀ ಜಿ.ಕೆ. ಸತ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಶ್ರೀ ಟಿ. ತಿಮ್ಮೇಶ್ ಅವರು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯು ರೂ 10,000(ಹತ್ತು ಸಾವಿರ) ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ. ಕನ್ನಡ ಚಳುವಳಿ ಸೇನಾನಿ ಶ್ರೀ ಮ. ರಾಮಮೂರ್ತಿ ಅವರು ರಾಜ್ಯಾದ್ಯಂತ ಕನ್ನಡ ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಹೋರಾಟಕ್ಕೆ ಶಕ್ತಿ ಮತ್ತು ಚೈತನ್ಯವನ್ನು ತುಂಬಿದವರು. ಇವರ ಹೆಸರಿನಲ್ಲಿರುವ ಈ ದತ್ತಿ ಪ್ರಶಸ್ತಿಯನ್ನು ರಾಜ್ಯದಲ್ಲಿ ಕನ್ನಡದ ಹೋರಾಟದಲ್ಲಿ ತೊಡಗಿಸಿಕೊಂಡಿರುವ 50 ವರ್ಷ ಮೀರಿದ ವಯೋಮಾನದ ಕನ್ನಡ ಕಾರ್ಯಕರ್ತರಿಗೆ ನೀಡತಕ್ಕದ್ದು ಎಂಬುದು ಈ ಪ್ರಶಸ್ತಿಯ ಆಶಯವಾಗಿದೆ. ಇದುವರೆಗೆ 8 ಜನ ಕನ್ನಡ ಚಳುವಳಿಗಾರರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2023ನೆಯ ಸಾಲಿನ ಈ ಪ್ರಶಸ್ತಿಗೆ ಕನ್ನಡ ಪರ ಹೋರಾಟಗಾರ ಹಿರಿಯ ಕಲಾವಿದರಾದ ಶ್ರೀ ಜಿ.ಕೆ. ಸತ್ಯ ಅವರು ಆಯ್ಕೆಯಾಗಿದ್ದಾರೆ.
ಪ್ರಸ್ತುತ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀ ಜಿ.ಕೆ. ಸತ್ಯ ಕನ್ನಡದ ಅತ್ಯಂತ ಜನಪ್ರಿಯ ವರ್ಣಚಿತ್ರಕಾರರು. ಅವರು ಚಿತ್ರಕಲೆಗೆ ಸೀಮಿತವಾಗದೆ ಕನ್ನಡ ಹೋರಾಟಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಕನ್ನಡ ಚಳುವಳಿಗಾರರಾದ ಅ.ನ.ಕೃ, ಮ. ರಾಮಮೂರ್ತಿ, ನಾಡಿಗೇರರು ಮೊದಲಾದವರ ನಿಕಟ ಒಡನಾಡಿಯಾಗಿದ್ದ ಅವರು ಗೋಕಾಕ್ ಚಳುವಳಿ ಅನುಷ್ಟಾನಕ್ಕೆ ಹೋರಾಡಿದ ಪ್ರಮುಖ ನೇತಾರರಲ್ಲಿ ಒಬ್ಬರು. ಇವರು ಕನ್ನಡ ಶಕ್ತಿ ಕೇಂದ್ರದ ಸಂಸ್ಥಾಪಕರೂ ಮತ್ತು ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದರು. ಸದಾ ಕನ್ನಡ, ಕನ್ನಡಿಗ, ಕರ್ನಾಟಕದ ಹಿತರಕ್ಷಣೆಗೆ ಹೋರಾಡುತ್ತಾ ಬಂದಿರುವ ಸತ್ಯ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ಟಿ.ತಿಮ್ಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.