ಬಾಗಲಕೋಟೆ : ಜಾನಪದ ಲೋಕದಲ್ಲಿ ಕೇಳಿ ಬರುವ ಹೆಸರು ವೆಂಕಪ್ಪ ಸುಗತೇಕರ್ ಇವರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದೆ. 81 ವರ್ಷದ ಸುಗತೇಕರ ಅನಕ್ಷರಸ್ಥರಾಗಿದ್ದು, ಬಾಲ್ಯದಿಂದ ಹಾಡುತ್ತಿದ್ದಾರೆ. ಕಳೆದ ಆರುವರೆಯಿಂದ ಏಳು ದಶಕಗಳ ಕಾಲ ಒಂದು ಸಾವಿರಕ್ಕೂ ಅಧಿಕ ಗೋಂಧಳಿ (ಜಾನಪದ) ಹಾಡುಗಳನ್ನು ಹಾಡಿದ್ದೂ ಅಲ್ಲದೇ 150ಕ್ಕೂ ಹೆಚ್ಚು ಗೋಂಧಳಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಕಥೆಗಳ ಬಗ್ಗೆ ಆಸಕ್ತಿ ಮೂಡಿಸಿದ ಗಾರುಡಿಗ. ಮೂಲೆ ಗುಂಪಾಗುತ್ತಿರುವ ಗೋಂಧಳಿ ಹಾಡುಗಳ ಕುರಿತು ಉಚಿತವಾಗಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ಜಾನಪದ ಲೋಕಕ್ಕೆ ಸುಗತೇಕರ್ ನೀಡಿದ್ದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದರು. ಈಚೆಗೆ ಹಾವೇರಿಯ ಜಾನಪದ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ‘ಪದ್ಮಶ್ರೀ ಪ್ರಶಸ್ತಿ’ಗೆ ಆಯ್ಕೆಯಾದ ಜಾನಪದ ಗಾಯಕ ವೆಂಕಪ್ಪ ಸುಗತೇಕರ್ “ದೇವಿ ಆಶೀರ್ವಾದದಿಂದ ಒಳ್ಳೆಯದು ಆಗಿದೆ. ಸೇವಾ ಮಾಡಿದ್ದಕ್ಕೂ ಮನ್ನಣೆ ದೊರೆತಿದೆ. ಗೋಂಧಳಿ ಪದಗಳನ್ನು ಉಳಿಸುವುದಕ್ಕಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಿದ್ದೇನೆ” ಎಂದು ಹೇಳುತ್ತಾರೆ.
1943 ಮೇ 5ರಂದು ಜನಿಸಿದ ವೆಂಕಪ್ಪ ಇವರ ತಂದೆ ಅಂಬಾಜಿ, ತಾಯಿ ಯಲ್ಲಮ್ಮ. ಬಡತನ ನಡುವೆಯೂ ಗೋಂಧಳಿ ಪದಗಳನ್ನು ಹಾಡುತ್ತಾ ಬದುಕಿದ ಇವರು ಕುಟುಂಬದ ಕಲೆಯನ್ನು ಮುಂದುವರೆಸಿಕೊಂಡು ಹೋದರು. ಪತ್ನಿ ದುರ್ಗಾಬಾಯಿ ಹಾಗೂ ಮಕ್ಕಳು ಬೆನ್ನಲುಬಾಗಿ ನಿಂತರು. ಪುರಂದರದಾಸರ ಪದಗಳು, ಶಿಶುನಾಳ ಶರೀಫರ ಪದಗಳು, ದೇವಿ ಪದಗಳು, ಬಿಡ ಪದಗಳು, ಮಡಿವಾಳ ರಾಚಯ್ಯ, ಕನಕದಾಸರು, ತತ್ವ ಪದಗಳು, ಅಂಬಾ ಭಾವಾನಿ ಪದಗಳು ಹಾಗೂ ಯಲ್ಲಮ್ಮ ಪದಗಳನ್ನು ಹಾಡುತ್ತಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದು, ಅಂಧ್ರಪ್ರದೇಶದ ವಾರಂಗಲ್‌ನಲ್ಲಿ ಅಂತರ ರಾಷ್ಟ್ರೀಯ ಸಂಗೀತ ಸಮ್ಮೇಳನ, ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವ, ಬೆಳಗಾವಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ, ಹಂಪಿ, ಆನೆಗೊಂದಿ ಉತ್ಸವ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ನೀಡಿ ಜನಪ್ರಿಯರಾಗಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ, ಆಕಾಶವಾಣಿ ಬಿ. ಹೈಗ್ರೇಡ್ ಪ್ರಶಸ್ತಿ, ಸಿದ್ದೇಶ್ವರ ರತ್ನ ಪ್ರಶಸ್ತಿ, ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಸೇರಿದಂತೆ ಸರ್ಕಾರ ಹಾಗೂ ಖಾಸಗಿ ಸಂಘ, ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿವೆ.