ಮಾನವೇತಿಹಾಸದ ನಿರ್ದಿಷ್ಟ ಸಾಮುದಾಯಿಕ ಹೆಜ್ಜೆಗಳನ್ನು ಸಮಕಾಲೀನಗೊಳಿಸುವ ವಿಶಿಷ್ಟ ಪ್ರಯತ್ನ
ಭಾರತದ ಶತಮಾನಗಳ ಚರಿತ್ರೆಯಲ್ಲಿ ಬುಡಕಟ್ಟು ಸಮುದಾಯಗಳು ಮತ್ತು ಅಲೆಮಾರಿ ಸಮೂಹಗಳ ಅಧ್ಯಾಯಗಳು ಭಾರತೀಯ ಸಂಸ್ಕೃತಿಯಷ್ಟೇ ವೈವಿಧ್ಯಮಯವಾಗಿದ್ದು ತಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ ನೆಲೆಗಳನ್ನೂ, ಸಾಮಾಜಿಕ ವ್ಯವಸ್ಥೆಗಳನ್ನೂ, ರಾಜಕೀಯ ಅರ್ಥಿಕತೆಯ ನೆಲೆಗಳನ್ನೂ ಸೃಷ್ಟಿಸಿಕೊಂಡು ಬಂದಿವೆ. ಇಂತಹ ಒಂದು ಅಲೆಮಾರಿ ಸಮುದಾಯ ಎಂದರೆ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಕಾಣಬಹುದಾದ ಬಂಜಾರ/ಲಂಬಾಣಿ ಸಮಾಜ. ಮೂಲತಃ ಗೋರ್ ಎಂದು ಗುರುತಿಸಲ್ಪಡುವ ಈ ಸಮುದಾಯವು ತನ್ನನ್ನು ́ಗೋರ್‌ಮಾಟಿʼ ಎಂದೇ ಕರೆದುಕೊಳ್ಳುತ್ತದೆ. ಅಂದರೆ “ನಮ್ಮಜನ-ನಮ್ಮವರು” ಎಂಬ ಅರ್ಥವನ್ನು ಸೂಸುತ್ತದೆ. ರಂಗಕರ್ಮಿ ಸಿ.ಬಸವಲಿಂಗಯ್ಯ (ಬಸು) ಈ ಸಮುದಾಯದ ಚಾರಿತ್ರಿಕ ನಡಿಗೆಯನ್ನು, ಅದರ ಒಳಹೊರಗುಗಳನ್ನು, ಅಲ್ಲಿನ ಶ್ರಮಿಕ ಪ್ರಪಂಚದ ಆಂತರಿಕ ತುಮುಲ-ತಲ್ಲಣ-ಆತಂಕ ಹಾಗೂ ನಿರೀಕ್ಷೆಗಳನ್ನು, ರಂಗ ವೇದಿಕೆಯ ಮೇಲೆ ತಂದಿಡುವ ಮೂಲಕ ಕರ್ನಾಟಕದ ಜನತೆಗೆ, ತಮ್ಮೊಳಗೇ ಇದ್ದೂ
ತಮ್ಮವರಾಗಿರದ ಒಂದು ಜನಸಮುದಾಯವನ್ನು ಪರಿಚಯಿಸಿದ್ದಾರೆ. ಅದೇ ರಂಗಾಯಣ ರೆಪರ್ಟರಿ ಪ್ರಯೋಗಿಸಿದ ನಾಟಕ ‘ಗೋರ್‌ಮಾಟಿ’. ತಮ್ಮ ಪರಂಪರೆ ಮತ್ತು ಜನಜೀವನವನ್ನು ಪುರಾಣ-ಐತಿಹ್ಯಗಳಲ್ಲಿ ಗುರುತಿಸಿಕೊಳ್ಳುವ ಬಂಜಾರ ಸಮುದಾಯ ತನ್ನ ಆದಿಯನ್ನು ಮಹಾಭಾರತದ ಕೃಷ್ಣ ಅಥವಾ ಕನ್ನಯ್ಯನಲ್ಲಿ ಕಾಣುತ್ತದೆ. ಆಧುನಿಕ ಚರಿತ್ರೆಯ ಪುಟಗಳಲ್ಲಿ ಬಂಜಾರ ಸಮುದಾಯವು ವಿವಿಧ ಹೆಸರುಗಳಿಂದ ದಾಖಲಿಸಲ್ಪಟ್ಟಿದ್ದು ದೆಹಲಿಯ ಸುಲ್ತಾನರು, ಮೊಘಲರು, ಹೈದರಾಬಾದಿನ ನಿಜಾಮರು ಮತ್ತು ಬ್ರಿಟೀಷ್ ವಸಾಹತುಶಾಹಿಯ ಕಾಲಾವಧಿಗಳಲ್ಲಿ ತಮ್ಮ ಜೀವನೋಪಾಯದ ಮಾರ್ಗದಲ್ಲಿ ಹಲವು ಆಯಾಮಗಳ ಸಂಕಷ್ಟಗಳನ್ನು, ಸವಾಲುಗಳನ್ನು ಎದುರಿಸುತ್ತಾರೆ. ಬಂಜಾರರ ಇತಿಹಾಸವನ್ನು ಗಮನಿಸಿದಾಗ ಈ ಗೋಪಾಲಕ ಸಮಾಜವು ವಸಾಹತುಶಾಹಿಯ ಬಂಡವಾಳಶಾಹಿ ಅರ್ಥಿಕತೆಯ ತಾರತಮ್ಯಗಳಿಗೊಳಗಾಗಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು, ವಸ್ತುಶಃ ದೈಹಿಕ ದುಡಿಮೆಯತ್ತ ಸಾಗುವುದು ಕಾಣುತ್ತದೆ. ಮೂಲತಃ ಅರಣ್ಯ ಪ್ರದೇಶಗಳಿಂದಲೇ ಹೊರಹೊಮ್ಮಿದ ಈ ಸಮುದಾಯವು ತಮ್ಮ ವೃತ್ತಿ ಪಾಲನೆಯೊಂದಿಗೆ ಜೀವನೋಪಾಯ ಮಾರ್ಗವಾಗಿ ಹುಲ್ಲುಗಾವಲುಗಳನ್ನು ಬಳಸುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಸಮಾಜವು ಆಧುನಿಕತೆಗೆ ತೆರೆದುಕೊಂಡಷ್ಟೂ ತನ್ನ ನೆಲಮೂಲ ಜನಸಾಂಸ್ಕೃತಿಕ ನೆಲೆಗಳನ್ನು ಹೊರಗಿಟ್ಟು ನೋಡುವ ಒಂದು ಪ್ರವೃತ್ತಿಯೂ 19ನೆಯ ಶತಮಾನದಿಂದಲೇ ಆರಂಭವಾಗಿತ್ತು. ಈ
ವಕ್ರದೃಷ್ಟಿಗೆ ಪೂರಕವಾಗಿ ಬೆಳೆದುಬಂದ ತಾತ್ವಿಕ ರಾಜಕೀಯ ನೆಲೆಗಳು ಹಾಗೂ ಸಮಾನಾಂತರವಾಗಿ ರೂಪುಗೊಂಡ ನಾಗರಿಕತೆಯ ಸಾಂಸ್ಕೃತಿಕ ಮೌಲ್ಯಗಳು ಬಂಜಾರಾಗಳಂತಹ ಅನೇಕ ತಳಸಮುದಾಯಗಳನ್ನು ಸಾಮಾಜಿಕ ಚೌಕಟ್ಟಿನ ಹೊರಗಿಟ್ಟು ನೋಡುವ ಒಂದು ಪರಂಪರೆಯನ್ನೂ ಸೃಷ್ಟಿಸಿತ್ತು.

ಈ ವ್ಯತ್ಯಯಗಳೇ ಬಂಜಾರಾ ಸಮುದಾಯವನ್ನು ‘ಅಪರಾಧಿ ಜಾತಿ’ ಎಂದು ಕಾನೂನಾತ್ಮಕವಾಗಿ ಪರಿಭಾವಿಸುವ ವಸಾಹತು ನೀತಿಗಳಿಗೂ ಕಾರಣವಾಗಿದ್ದವು. ತಮ್ಮ ಮೂಲ ಸೆಲೆಯಿಂದ ಬೇರ್ಪಟ್ಟು, ಮೂಲ ನೆಲೆಯಿಂದ ಉಚ್ಛಾಟಿಸಲ್ಪಟ್ಟು ಇತ್ತ ನಗರವಾಸಿಗಳೂ ಆಗದೆ ಅತ್ತ ಆಧುನಿಕತೆಗೂ ತೆರೆದುಕೊಳ್ಳಲಾಗದೆ ತಮ್ಮ ಅಲೆಮಾರಿ ಬದುಕಿಗೆ ಅಗತ್ಯವಾದ ಜೀವನೋಪಾಯ ಮಾರ್ಗಗಳನ್ನು ಅರಸುತ್ತಾ ಬಂದ ಬಂಜಾರ ಸಮಾಜವು, ನಗರೀಕೃತ ಸಮಾಜದ ದೃಷ್ಟಿಯಲ್ಲಿ ʼಊರ ಹೊರಗಿರಬೇಕಾದʼ ಜನಸಮುದಾಯಗಳಾಗಿ ಕಾಣತೊಡಗಿದ್ದು ಆಧುನಿಕ ಭಾರತದ ವಿಕೃತಿಗಳಲ್ಲೊಂದು. ಈ ವಿಕೃತಿಗಳನ್ನೂ ದಾಟಿ ಮುನ್ನಡೆದ ಬಂಜಾರ ಸಮುದಾಯ ಕ್ರಮೇಣ ಗ್ರಾಮೀಣ ಭಾರತದ ಸುತ್ತಮುತ್ತಲಿನ ಬಂಜರು ಭೂಮಿಯನ್ನೇ ಕೃಷಿಯೋಗ್ಯವಾಗಿಸುವ ಮೂಲಕ ಸ್ವಂತ ಕೃಷಿಯಲ್ಲಿ ತೊಡಗಿದ್ದುದು ಅವರ ಶ್ರಮಶಕ್ತಿಯ ಕ್ಷಮತೆಗೆ ಸಾಕ್ಷಿ.
ವಸಾಹತೋತ್ತರ ಭಾರತದಲ್ಲಿ ತಮ್ಮದೇ ಆದ ಭೌತಿಕ ನೆಲೆ ಕಂಡುಕೊಂಡ ಬಂಜಾರ ಸಮುದಾಯ ತಮ್ಮ ‘ಅಪರಾಧಿ’ ಪಟ್ಟವನ್ನು ಕಳಚಿಕೊಳ್ಳುವುದಷ್ಟೇ ಅಲ್ಲದೆ ತಮ್ಮ ಅಲೆಮಾರಿ ಲಕ್ಷಣಗಳನ್ನೂ ಕ್ರಮೇಣ ಕಳೆದುಕೊಳ್ಳುತ್ತಾ ತನ್ನದೇ ಆದ ಸಾಂಸ್ಕೃತಿಕ ಭೂಮಿಕೆಯನ್ನು ನಿರ್ಮಿಸಿಕೊಳ್ಳಲಾರಂಭಿಸಿತು. ಬ್ರಿಟೀಷ್ ವಸಾಹತುಶಾಹಿಯು ಒದಗಿಸಿದ ಶಿಕ್ಷಣ ಮತ್ತು ಸ್ವಾತಂತ್ರ‍್ಯಪೂರ್ವ ಭಾರತದ ಹಲವು ಸೈದ್ಧಾಂತಿಕ ಚಿಂತನಾ ವಾಹಿನಿಗಳು ಈ ಸಮುದಾಯದ ಜೀವನದಲ್ಲಿ ಬೀರಿದ ಪ್ರಭಾವ ಚಾರಿತ್ರಿಕವಾದದ್ದು. 20ನೆಯ ಶತಮಾನದ ಕೆಲವು ಸುಧಾರಣಾವಾದಿ ದೊರೆಗಳು ತಮ್ಮ ಸಂಸ್ಥಾನಗಳಲ್ಲಿ ಬಂಜಾರ ಸಮುದಾಯಕ್ಕೆ ಒಂದು ಅಸ್ಮಿತೆಯನ್ನೊದಗಿಸಿದ್ದು ಚರಿತ್ರಾರ್ಹ ಸಂಗತಿ. ಮೈಸೂರಿನ ನಾಲ್ವಡಿ ಒಡೆಯರ್ ಸಹ ಅಂಥವರಲ್ಲೊಬ್ಬರು.
ರಂಗದ ಮೇಲೆ ಗೋರ್‌ಮಾಟಿ :
ಈ ಸುಧೀರ್ಘ ಜನೇತಿಹಾಸವನ್ನು ಎಲ್ಲ ಆಯಾಮಗಳಿಂದಲೂ ರಂಗದ ಮೇಲೆ ಕಟ್ಟಿಕೊಡುವ ಪ್ರಯತ್ನವನ್ನು ಪರಿಕಲ್ಪನೆ-ಸಂಗೀತ-ನಿರ್ದೇಶನ ವಹಿಸಿರುವ ಸಿ. ಬಸವಲಿಂಗಯ್ಯ (ಬಸು) ಅವರು ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಬದ್ಧತೆಯಿಂದ ಮಾಡಿದ್ದಾರೆ. ಇತಿಹಾಸ ಪುಸ್ತಕವನ್ನು ಪುಟಪುಟವಾಗಿ ತೆರೆದಿಡುವ ಮಾದರಿಯಲ್ಲಿ ಬಸು ಅವರ ‘ಗೋರ್‌ಮಾಟಿ’ ರೂಪುಗೊಂಡಿರುವುದು ವಿಶೇಷ. ಪುರಾಣ ಮಿಥ್ಯೆಗಳ ಸನ್ನಿವೇಶಗಳಾಗಲೀ, ಚಾರಿತ್ರಿಕ ಪ್ರಸಂಗಗಳಾಗಲೀ ಅಥವಾ ಬಂಜಾರ ಸಮುದಾಯದ ಆಚರಣಾ ವಿಧಿವಿಧಾನಗಳ ನಿರೂಪಣೆಯಲ್ಲಾಗಲೀ ಗುರುತಿಸಬಹುದಾದ ಸಮಾನ ಎಳೆ ಎಂದರೆ ಗತ-ಮರ್ತಮಾನವನ್ನು ನೋಡುವ ಬಗೆ. ರಂಗಾಯಣ ರೆಪರ್ಟರಿಯ ಹೊಸ ಕಲಾವಿದರ ದೊಡ್ಡ ತಂಡವನ್ನು ಕಟ್ಟಿಕೊಂಡು ರಂಗಪ್ರವೇಶ ಮಾಡಿರುವ ʼಗೋರ್‌ಮಾಟಿʼ ಪ್ರತಿಯೊಂದು ದೃಶ್ಯದಲ್ಲೂ ಪ್ರೇಕ್ಷಕರ ಆಸಕ್ತಿಯನ್ನು ಉದ್ದೀಪನಗೊಳಿಸುತ್ತಾ, ಬಂಜಾರರ ಸಾಮಾಜಿಕ-ಸಾಂಸ್ಕೃತಿಕ ಹೆಜ್ಜೆ ಗುರುತುಗಳನ್ನು ಮತ್ತಷ್ಟು ತಿಳಿದುಕೊಳ್ಳುವ ಹಂಬಲ ಸೃಷ್ಟಿಸುವಂತಿದೆ. ಇದಕ್ಕೆ ಕಾರಣ ರಂಗಸಜ್ಜಿಕೆಯ ವೈವಿಧ್ಯಮಯ ರಂಗು, ವಸ್ತ್ರ ವಿನ್ಯಾಸ, ನೃತ್ಯ-ಸಂಗೀತ ಮತ್ತು ಎಲ್ಲಾ ಕಲಾವಿದರ ಭಾವಪೂರ್ಣ ಅಭಿನಯ.

‘ಗೋರ್‌ಮಾಟಿ’ ನಾಟಕದ ವಿಶೇಷ ಎಂದರೆ 90ಕ್ಕೂ ಹೆಚ್ಚು ವೈವಿಧ್ಯಮಯ ಪಾತ್ರಗಳನ್ನು 20-25 ನಟರು ನಿರ್ವಹಿಸಿರುವುದು. ಪಾತ್ರ ವೈವಿಧ್ಯವನ್ನು ಕಾಪಾಡಿಕೊಂಡು ತಮ್ಮ ಅಭಿನಯ ಕಲೆಯನ್ನು ತನ್ಮಯತೆ, ತಲ್ಲೀನತೆಯಿಂದ ಪ್ರದರ್ಶಿಸಿರುವುದು ಎಲ್ಲಾ ಕಲಾವಿದರ ಹೆಗ್ಗಳಿಕೆ ಎನ್ನಬಹುದು. ವಿಭಿನ್ನ ವಸ್ತ್ರ ವಿನ್ಯಾಸ, ಸನ್ನಿವೇಶಗಳು ಅಪೇಕ್ಷಿಸುವ ವಿಭಿನ್ನ ಹಾವಭಾವಗಳು ಹಾಗೂ ಭಾವನಾತ್ಮಕ ಅಭಿವ್ಯಕ್ತಿಗಳಿಗೆ ಎಲ್ಲಿಯೂ ಚ್ಯುತಿ ಬಾರದಿರುವಂತೆ ಎಲ್ಲ ಕಲಾವಿದರೂ ನಟಿಸಿರುವುದು ನಾಟಕದ ಹಿರಿಮೆ ಎಂದೇ ಹೇಳಬಹುದು. ಪ್ರೇಕ್ಷಕರಿಗೆ ಎಲ್ಲಿಯೂ ಏಕತಾನತೆ ಕಾಣದ ಹಾಗೆ ನಿರ್ದೇಶಿಸಿರುವ ಬಸು ಪ್ರತಿಯೊಬ್ಬ ಕಲಾವಿದರಿಂದಲೂ ಗರಿಷ್ಠ ಕಲಾಭಿವ್ಯಕ್ತಿಯನ್ನು ಹೊರತೆಗೆದಿರುವುದು ಮೆಚ್ಚತಕ್ಕ ಅಂಶ.

ನಾ . ದಿವಾಕರ, ಮೈಸೂರು
