ಮಂಜೇಶ್ವರ : ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ 141ನೇ ಜನ್ಮ ದಿನಾಚರಣೆಯು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ದಿನಾಂಕ 23-03-2024ರಂದು ನಡೆಯಿತು.
ಮಂಜೇಶ್ವರ ಎಂದಾಗಲೇ ಪೈಗಳ ನೆನಪಾಗುವುದರಿಂದ ಈ ಪ್ರದೇಶದಲ್ಲಿ ಅವರ ಹೆಸರು ಒಂದು ದಿನಕ್ಕಷ್ಟೇ ಸೀಮಿತವಲ್ಲ. ನವೋದಯ ಸಾಹಿತ್ಯದ ಹೆಸರಾಂತ ಕವಿ ಆಗಿದ್ದಂತೆಯೆ ಪತ್ರಿಕೆ, ಸಂಶೋಧನಾ ವಲಯ, ಸ್ವಾತಂತ್ರ್ಯದ ತುಡಿತ, ನಾಟಕಗಳ ರಚನೆ ಮಹಾತ್ಮರ ಸಂದೇಶಗಳ ಅಧ್ಯಯನ, ಶ್ರೀಕೃಷ್ಣನಂತಹ ಪೌರಾಣಿಕ ಅಧ್ಯಾತ್ಮಿಕ ವ್ಯಕ್ತಿತ್ವಗಳ ಕಂಡರಿಸುವಿಕೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೀರ್ತಿಶಾಲಿ ಅನಿಸಿ ರಾಷ್ಟ್ರ ಕವಿ ಪ್ರಶಸ್ತಿ ಪಡೆದವರು. ಹೀಗಾಗಿಯೇ ಅವರ ಸಾಧನೆ ಸಾರ್ವಕಾಲಿಕ ಕವಿವಾಣಿಯ ರೂಪದಲ್ಲಿ ಶಾಶ್ವತವಾಗಿದೆ.
ಕಾಲೇಜಿನ ಕನ್ನಡ ವಿಭಾಗ ಹೆಚ್ಚು ಮತುವರ್ಜಿ ವಹಿಸಿ ಕನ್ನಡ ಐಚ್ಛಿಕ ತರಗತಿಗಳ ವಿದ್ಯಾರ್ಥಿಗಳಿಂದ ಉಪನ್ಯಾಸಗಳ ಮೂಲಕ ಪೈಗಳ ಪರಿಚಯ ಮಾಡಿಸಿದ್ದು ಸಂದರ್ಭೋಚಿತವಾಗಿತ್ತು. ಆರು ಮಂದಿ ಪಾಲು ಮಾಡಿಕೊಂಡು ಪೈಗಳ ನುಡಿಚಿತ್ರ ಹೆಣೆದರು. ಶರ್ವಾಣಿ ಬಿ.ಕೆ. ಪೈಗಳು ಅನುಭವಿಸಿದ ಸಂಕಷ್ಟಗಳ ವಿವರಗಳ ಸಮೀಕ್ಷೆ ನಡೆಸಿದರೆ, ಪೈಗಳ ದಾಂಪತ್ಯ ಜೀವನ, ಮಡದಿಯ ಅಗಲಿಕೆಯಿಂದ ಅಧ್ಯಯನ ಅರ್ಧಕ್ಕೆ ನಿಂತರೂ ಆ ಅಮೋಘ ಪ್ರತಿಭೆ ಕನ್ನಡದ ಕೈಂಕರ್ಯದಲ್ಲಿ ಸಂದ ರೀತಿಯನ್ನು ವಿದ್ಯಾಶ್ರೀ ವಿವರಿಸಿದರು. ಪ್ರಥಮ ವರ್ಷ ಬಿ.ಎ. ತರಗತಿಯ ರಚನಾ ಪೈಗಳ ಕಾವ್ಯ ರಚನೆಯಲ್ಲಿ ದೇಶಭಕ್ತಿ, ಪ್ರಕೃತಿ ಪ್ರೇಮ, ನಾಡಿನ ಐತಿಹಾಸಿಕ ನೋಟ, ಓರಗೆಯ ತುಳು ಜಗತ್ತು, ದ.ಕ.ದ ಸಾಂಸ್ಕೃತಿಕ ಕೊಡುಗೆಗಳನ್ನು ಕಂಡರಿಸಿದ ಬಗ್ಗೆ ಮಾತನಾಡಿದರು.
ದೀಕ್ಷಿತ ಕೆ. (ದ್ವಿತೀಯ ಬಿ.ಎ.) ಹೆಬ್ಬೆರಳು ಹಾಗೂ ನೋ ನಾಟಕಗಳ ಸಂಕ್ಷಿಪ್ತ ಪರಿಚಯ ಮಾಡಿಸುತ್ತ ಅವರ ಸಂಗ್ರಹಾನುವಾದ, ಭಾವಾನುವಾದದ ಕೌಶಲಗಳ ಕುರಿತು ವಿಮರ್ಶಿಸಿದರೆ ಪೈಗಳು ಆಧುನಿಕ ಕನ್ನಡ ಜಗತ್ತಿನ ಮೊದಲ ಸಂಶೋಧಕನಾಗಿ ಮಾಡಿದ ಕೆಲಸಗಳ ವಿವರಗಳನ್ನು ಮುಂದಿಡುತ್ತ ಅವರ ಸತ್ಯದ ಪಕ್ಷಪಾತ, ಕಾಲ ನಿರ್ಣಯವೇ ಮುಂತಾದ್ದರಲ್ಲಿ ತಪ್ಪು ಆಗಿದ್ದರೆ ತಿದ್ದಿಕೊಂಡ ಉದಾರ ನೀತಿಗಳ ವಿಷಯದಲ್ಲಿ ಆದಿಶ್ರೀ ಎಸ್ ಅಭಿಮಾನ ವ್ಯಕ್ತ ಪಡಿಸಿದರು. ಖಂಡಕಾವ್ಯಗಳ ಮೇಲೆ ಉಪನ್ಯಾಸ ಮಂಡಿಸಿ ವಿವೇಕ ವಿಶೇಷವಾಗಿ ಗೊಲ್ಗೊಥಾ ಮತ್ತು ವೈಶಾಖಿ ಕಾವ್ಯಗಳ ಸಂದೇಶಗಳನ್ನು ವಿವರಿಸಿ, ಹಿಂಸೆಯನ್ನು ವಿರೋಧಿಸಿದ ಯೇಸುವನ್ನೆ ಹಿಂಸಿಸಿದ ಕ್ರೂರ ಜಗತ್ತನ್ನು ಚಿತ್ರಿಸಿದ ಪೈಗಳ ಕಾವ್ಯ ಶೈಲಿಯನ್ನು ಮೆಚ್ಚಿ ಕೊಂಡಾಡಿದರು.
ಪ್ರಾಂಶುಪಾಲರಾದ ಶ್ರೀ ಮೊಹಮ್ಮದ್ ಆಲಿ ಕೆ. ಇವರು ಉದ್ಘಾಟಿಸಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸಮನ್ವಯಕಾರ ವಿಶಾಲಾಕ್ಷ ಪುತ್ರಕಳ ಅವರ ಸಂದರ್ಭೋಚಿತ ಮಾತುಗಳೊಂದಿಗೆ, ಶ್ರೀ ದಿನೇಶ ಕೆ.ಎಸ್. ಅವರಿಂದ ಶುಭಾಶಂಸನೆ, ವಿಭಾಗ ಮುಖ್ಯಸ್ಥ ಶಿವ ಶಂಕರ್, ಡಾ ಸುಜೇಶ್, ಆಗ್ನೇಯ ಸಾಯಿ ಅವರಿಂದ ನುಡಿ ನಮನ, ಉಪನ್ಯಾಸಕಿ ಜಯಂತಿ, ಶೇಖರ ಶೆಟ್ಟಿ ಅವರ ಸಹಕಾರದಿಂದ ಒಟ್ಟು ಕಾರ್ಯಕ್ರಮ ಅಂದವಾಗಿ ಪ್ರಸ್ತುತಗೊಂಡಿತು.
ಇತ್ತೀಚೆಗೆ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ‘ಗಡಿನಾಡ ಚೇತನ ಪ್ರಶಸ್ತಿ’ ಎಂಬ ಪ್ರತಿಷ್ಠಿತ ಗೌರವವನ್ನು ಗಳಿಸಿದ ಹಿರಿಯ ಕವಿ, ಲೇಖಕ, ಪತ್ರಕರ್ತ ಮುಂತಾಗಿ ಹೆಸರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರನ್ನು ಕ.ಸಾ.ಪ. ಕೇರಳ ಗಡಿನಾಡ ಘಟಕದ ವತಿಯಿಂದ ಸನ್ಮಾನಿಸಲಾಯಿತು.