ಸುರತ್ಕಲ್ : ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿ ಸೆನೆಟ್ ಮತ್ತು ಲಲಿತಕಲಾ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ದಿನಾಂಕ 05-10-2023 ರಂದು ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ನರಸಿಂಹ ಮೂರ್ತಿ ಆರ್ “ಸ್ಪರ್ಧಾತ್ಮಕ ಆಧುನಿಕ ಬದುಕಿನಲ್ಲಿ ಉತ್ತಮ ಕಲಿಕಾ ಸಾಧನೆಯೊಂದಿಗೆ ಸಂವಹನ ಕಲಾ ಕೌಶಲ್ಯ ಹಾಗೂ ನಾಯಕತ್ವದ ಗುಣಗಳು ಮುಖ್ಯ. ವಿದ್ಯಾರ್ಥಿಗಳು ತಮಗೆ ದೊರಕುವ ಅವಕಾಶ ಬಳಸಿಕೊಂಡು ಉತ್ತಮ ಕೌಶಲಗಳನ್ನು ಪಡೆದುಕೊಳ್ಳಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಕಾಲೇಜಿನ ಲಲಿತಕಲಾ ಸಂಘವು ಕಲಾಸಕ್ತ ವಿದ್ಯಾರ್ಥಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸಿ ತರಬೇತಿ ನೀಡಿದ ಫಲವಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಕಾಲೇಜಿನ ಕೀರ್ತಿಯನ್ನು ಬೆಳಗಿಸಿದೆ” ಎಂದರು. ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಕುಳಾಯಿ ಕಾಲೇಜಿನ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿದರು.
ಉಪಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಭಟ್ ಎಸ್.ಜಿ ಪ್ರತಿಜ್ಞಾವಿಧಿ ಬೋಧಿಸಿದರು. ಲಲಿತಕಲಾ ಸಂಘದ ಸಂಯೋಜಕರಾದ ಡಾ. ಸೌಮ್ಯ ಪ್ರವೀಣ್ ಕೆ., ಕುಮಾರ ಮಾದರ, ಡಾ. ವಿಜಯಲಕ್ಷ್ಮೀ, ವಿದ್ಯಾರ್ಥಿ ಸೆನೆಟ್‌ನ ಕಾರ್ಯದರ್ಶಿಗಳು ವಿವಿಧ ಸಂಘಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಹಿತಾ ಉಮೇಶ್ ಸ್ವಾಗತಿಸಿ, ಸೌಪರ್ಣಿಕಾ ನಾಯ್ಕ್ ನಿರೂಪಿಸಿ, ಪೂರ್ವಿ ಅಶೋಕ್ ವಂದಿಸಿದರು.