ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು. ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ 2023-2024ನೇ ಸಾಲಿನ 21ನೇ ‘ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕಾರ’ ಸಮಾರಂಭವು ದಿನಾಂಕ 21-05-2024ನೇ ಮಂಗಳವಾರ ಬೆಳಿಗ್ಗೆ ಘಂಟೆ 11.00 ರಿಂದ ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಕುಶಾಲನಗರ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ. ಕೇಶವಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ಇಲ್ಲಿನ ಪ್ರಾಚಾರ್ಯರಾದ ಪ್ರೋ ಬಿ. ಎಂ. ಪ್ರವೀಣ್ ಕುಮಾರ್ ಉದ್ಘಾಟಿಸಲಿದ್ದಾರೆ.
2023-2024ನೇ ಸಾಲಿನ 21ನೇ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕಾರವನ್ನು ಮೂರ್ನಾಡು ಇಲ್ಲಿನ ಕವಯತ್ರಿ ಹಾಗೂ ಶಿಕ್ಷಕಿಯಾದ ಶ್ರೀಮತಿ ಕೆ. ಜಿ. ರಮ್ಯ ಇವರಿಗೆ ನೀಡಿ ಗೌರವಿಸಲಿದ್ದು, ಗಾಳಿಬೀಡುವಿನ ಜವಹರ್ ನವೋದಯ ವಿದ್ಯಾಲಯದ ಅದ್ಯಾಪಕರು ಹಾಗೂ ಸಾಹಿತಿಗಳಾದ ಶ್ರೀ ಮಾರುತಿ ದಾಸಣ್ಣವರ್ ಪ್ರಶಸ್ತಿ ಪ್ರದಾನ ಮಾಡಿ ಪುಸ್ತಕದ ಬಗ್ಗೆ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಬಿ. ಸಿ. ದೊಡ್ಡಗೌಡ ಭಾಗವಹಿಸಲಿದ್ದು, ಕುಶಾಲನಗರದ ಸಾಹಿತಿ ಹಾಗೂ ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುನೀತಾ ಲೋಕೇಶ್ ಮುಖ್ಯಭಾಷಣ ಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ಕಥಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದ್ದು, ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಸುನೀಲ್ ಕುಮಾರ್ ಬಹುಮಾನಗಳನ್ನು ನೀಡಲಿದ್ದಾರೆ.

