ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಗ್ರಾಮ ಪಂಚಾಯತ್ ಕೆದಂಬಾಡಿ ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿಯವರ ಪೋಷಕತ್ವದಲ್ಲಿ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ-1 ಹಾಗೂ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ದಿನಾಂಕ 28 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದ.ಕ.ಜಿ.ಪ.ಹಿ.ಪ್ರಾ. ಶಾಲೆ ಕೆದಂಬಾಡಿ ಇದರ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಬಿ. ಆಯಿಷತ್ ಮುನೀಷ ಇವರು ಗ್ರಾಮ ಸಾಹಿತ್ಯ ಸಂಭ್ರಮ ಇದರ ಸರ್ವಾಧ್ಯಕ್ಷತೆ ವಹಿಸಲಿರುವರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಎನ್. ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಗುವುದು.
ವಿವಿಧ ಗೋಷ್ಠಿಗಳು ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯುವ ಈ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿನೂತನ ಪ್ರಯೋಗಗಳನ್ನು ಹಮ್ಮಿಕೊಂಡಿದ್ದು, ಪೂರ್ವಾಹ್ನ 11-00 ಗಂಟೆಗೆ ಗೋಷ್ಠಿ -1ರಲ್ಲಿ ‘ಐ.ಎ.ಎಸ್. ಮತ್ತು ಐ.ಪಿ.ಎಸ್. ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆ, ದೇಶದ ರಕ್ಷಣೆ ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕತೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಗೋಷ್ಠಿ -2ರಲ್ಲಿ ‘ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಗೋಷ್ಠಿ -3ರಲ್ಲಿ ಬಾಲ ಕವಿಗೋಷ್ಠಿ, ಗೋಷ್ಠಿ-4ರಲ್ಲಿ ಬಾಲ ಕಥಾಗೋಷ್ಠಿ, ಗೋಷ್ಠಿ -5ರಲ್ಲಿ ಸಾಹಿತ್ಯ ಆಸಕ್ತಿ ಇಲ್ಲದ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಸೆಳೆಯುವ ನಿಟ್ಟಿನಲ್ಲಿ ‘ಪ್ರವಾಸ ಕಥನ’ ಲೇಖನ ವಾಚನ, ಗೋಷ್ಠಿ -6ರಲ್ಲಿ ಮಕ್ಕಳನ್ನೂ ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರಕ್ಕೆ ಸೆಳೆಯುವ ನಿಟ್ಟಿನಲ್ಲಿ ‘ನನ್ನ ಆಪ್ತಮಿತ್ರ ಲೇಖನ ವಾಚನ’ ಹಾಗೂ ಗೋಷ್ಠಿ -7ರಲ್ಲಿ ‘ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ’ ಲೇಖನ ವಾಚನ ನಡೆಯಲಿದೆ.
ಸ.ಹಿ.ಪ್ರಾ. ಶಾಲೆ ಕೆದಂಬಾಡಿ ಮತ್ತು ಸ.ಉ.ಹಿ.ಪ್ರಾ. ಶಾಲೆ ತಿಂಗಳಾಡಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆ ತಿಂಗಳಾಡಿ ಇದರ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರತಿಭಾ ಎನ್. ಇವರು ಸಮಾರೋಪ ಭಾಷಣ ಮಾಡಲಿದ್ದು, ಕ.ಸಾ.ಪ. ಪುತ್ತೂರು ಇದರ ಗೌರವ ಕೋಶಾಧಿಕಾರಿ ಡಾ. ಹರ್ಷ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ.