ಲಾಸ್ ಏಂಜಲೀಸ್ : ಭಾರತೀಯ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಇವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ‘ತ್ರಿವೇಣಿ’ ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ. ಇದರಲ್ಲಿ 7 ಹಾಡುಗಳಿದ್ದು ಭಾರತದ ಪವಿತ್ರ ನದಿಗಳಾದ ಯಮುನಾ, ಗಂಗಾ, ಸರಸ್ವತಿಯ ಸಂಸ್ಕೃತಿ ಪರಿಚಯಿಸುತ್ತದೆ .
ಮೊಲತಃ ಚೆನ್ನೈ ನವರಾದ ಟಂಡನ್ ಪೆಪ್ಸಿಕೋದ ಮಾಜಿ ಸಿ. ಇ. ಒ. ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಚಂದ್ರಿಕಾ ಈ ಪ್ರಶಸ್ತಿ ಗೆದ್ದಿದ್ದಾರೆ.ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿ ಗೆದ್ದಿರುವುದು ನಿಜವಾಗಿಯೂ ನನಗೆ ವಿಶೇಷ ಕ್ಷಣವಾಗಿದೆ. ಅಸಾಧಾರಣ ಸಂಗೀತ ದಿಗ್ಗಜ್ಜರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಆನಂದವನ್ನುಂಟು ಮಾಡಿದೆ ಎಂದು ಚಂದ್ರಿಕಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.