ಪುತ್ತೂರು : ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಜ್ಯೋತಿ ರಥಯಾತ್ರೆ’ಯನ್ನು ದಿನಾಂಕ 01 ಅಕ್ಟೋಬರ್ 2024ರಂದು ಕನಕಮಜಲಿನಲ್ಲಿ ತಾಲೂಕು ಆಡಳಿತ ವತಿಯಿಂದ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ನವೀನ್ ಭಂಡಾರಿ, ಉಪತಹಸೀಲ್ದಾರ್ ಶ್ರೀ ದಯಾನಂದ ಆರ್.ಐ., ಶ್ರೀ ಗೋಪಾಲ, ಸಾಹಿತ್ಯ ಪರಿಷತ್ ವತಿಯಿಂದ ಪುತ್ತೂರು ಉಮೇಶ್ ನಾಯಕ್, ಶ್ರೀ ಬಿ. ಐತಪ್ಪ ನಾಯ್ಕ್ ಹಾಗೂ ಇನ್ನಿತರರು ಸ್ವಾಗತಿಸಿದರು.
ಬಳಿಕ 11-00 ಗಂಟೆಗೆ ಆಡಳಿತ ಸೌಧದ ಬಳಿ ಆಗಮಿಸಿದ ಈ ಕನ್ನಡ ಜ್ಯೋತಿ ರಥವನ್ನು ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ, ಚೀಫ್ ಕಮಾಂಡೆಂಟ್ ಹಾಗೂ ಶ್ರೀ ವೆಂಕಟರಮಣ ಕಳುವಾಜೆ ಇವರುಗಳು ಕನ್ನಡ ಭುವನೇಶ್ವರಿಗೆ ಹೂಮಾಲೆಯನ್ನು ಹಾಕಿ ಗೌರವಾರ್ಪಣೆ ಸಲ್ಲಿಸಿದರು. ಆಡಳಿತ ಸೌಧದ ಬಳಿ ಸಹಾಯಕ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ನವೀನ್ ಭಂಡಾರಿಯವರು ತೆಂಗಿನಕಾಯಿಯನ್ನು ಹೊಡೆದು ಪುರ ಮೆರವಣಿಗೆಗೆ ಚಾಲನೆ ನೀಡಿದರು.
ಪುರ ಮೆರವಣಿಗೆಯ ಕನ್ನಡ ಜ್ಯೋತಿ ರಥಯಾತ್ರೆಯನ್ನು ಬೊಳುವಾರಿನಿಂದ ಪ್ರಾರಂಭಿಸಿ ಮುಖ್ಯರಸ್ತೆಯಾಗಿ ಗಾಂಧಿ ಕಟ್ಟೆಯಾಗಿ ದರ್ಬೆ ವೃತ್ತದ ಬಳಿ ಮುಕ್ತಾಯಗೊಳಿಸಲಾಯಿತು. ಪುತ್ತೂರಿನ ಹಲವಾರು ಕನ್ನಡ ಪ್ರೇಮಿಗಳು,ಸಂಘ-ಸಂಸ್ಥೆಗಳ ವತಿಯಿಂದ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಹಾಗೂ ಹಾರರ್ಪಣೆ ನಡೆಯಿತು. ತಾಲೂಕು ಆಡಳಿತ, ಪುತ್ತೂರು ಪೊಲೀಸ್ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಈ ಕನ್ನಡ ಜ್ಯೋತಿ ರಥ ಯಾತ್ರೆ ಯಶಸ್ವಿಯಾಗುವಲ್ಲಿ ಸಹಕರಿಸಿದರು.