ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳಗಂಗೋತ್ರಿ ಇದರ ಆಶ್ರಯದಲ್ಲಿ ‘ಗುರು ಜಯಂತಿ – 2023’ ಹಾಗೂ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ ಇವರಿಗೆ ‘ನಾರಾಯಣಗುರು ಸಂಶೋಧನಾ ಪ್ರಶಸ್ತಿ’ ಪ್ರದಾನ ಸಮಾರಂಭ ಕಾರ್ಯಕ್ರಮವು ದಿನಾಂಕ 16-09-2023ರಂದು ವಿಶ್ವವಿದ್ಯಾನಿಲಯದ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಹಾವೇರಿ ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಇವರು ಮಾತನಾಡುತ್ತಾ “ವಿಶ್ವವಿದ್ಯಾನಿಲಯಗಳು ಎಂದರೆ ಕೇವಲ ಕಟ್ಟಡಗಳ ಸಮುಚ್ಛಯವಲ್ಲ. ಯುವ ಜನಾಂಗದ ಬುದ್ಧಿ, ಮನಸ್ಸುಗಳನ್ನು ಬೆಸೆದು ಮನುಷ್ಯವನ್ನು ರೂಪಿಸುವ ಕೇಂದ್ರವಾಗಬೇಕು ಬ್ರಹ್ಮಶ್ರೀ ನಾರಾಯಣ ಗುರುಗಳು ಮುಖ್ಯಸ್ಥಾನದಲ್ಲಿ ನಿಲ್ಲುತ್ತಾರೆ. ರಾಜಶ್ರೀ ಟಿ. ರೈ ಪೆರ್ಲ ಅವರು ನಾರಾಯಣ ಗುರುಗಳ ಬಗ್ಗೆ ವಿಸ್ತಾರವಾದ ಅಧ್ಯಯನ, ಕ್ಷೇತ್ರ ಕಾರ್ಯದ ಸಂಶೋಧನಾ ಕೃತಿ ರಚಿಸಿ ಸಂಶೋಧನೆಗೆ ಹೊಸ ಆಯಾಮ ಕೊಟ್ಟಿದ್ದಾರೆ. ಈ ಪ್ರಶಸ್ತಿ ಅವರಿಗೆ ಅರ್ಹವಾಗಿಯೇ ಸಂದಿವೆ” ಎಂದು ಹೇಳಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್, “ಜಾತೀಯತೆಯ ಪಿಡುಗನ್ನು ಶಿಕ್ಷಣದ ಮೂಲಕ ದೂರಗೊಳಿಸಿ ದಕ್ಷಿಣ ಭಾರತದಲ್ಲಿ ಸುಧಾರಣೆಯ ಕ್ರಾಂತಿ ಮಾಡಿದವರು ನಾರಾಯಣ ಗುರುವರ್ಯರು. ಅವರು ಸಮಾಜದ ಪರಿವರ್ತಕರೂ ಹೌದು. ವಿದ್ಯೆಯೇ ನಮ್ಮ ಬದುಕನ್ನು ಸಾರ್ಥಕಗೊಳಿಸುತ್ತದೆ. ಇಂದಿನ ಯುವ ಜನಾಂಗ ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು.
ಮಂಗಳೂರು ವಿ.ವಿ.ಕುಲಪತಿ ಪ್ರೊ.ಜಯರಾಜ್ ಅಮೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಾರಾಯಣ ಗುರುಗಳ ಚಿಂತನೆಯನ್ನು ನಾವು ಮೈಗೂಡಿಸಿಕೊಂಡರೆ ಸಮಾಜದ ಎಲ್ಲಾ ಸಮಸ್ಯೆಗಳೂ ಪರಿಹಾರ ಕಾಣುತ್ತವೆ. ನಾರಾಯಣ ಗುರು ಅವರ ಚಿಂತನೆ ಒಂದು ಪ್ರದೇಶ, ಸೀಮಿತ ಸಮುದಾಯಕ್ಕೆ ಸೀಮಿತವಾಗದೆ, ಅವರು ಇಡೀ ಜಗತ್ತಿನ ಶ್ರೇಷ್ಠ ಸಂತರಾಗಿದ್ದಾರೆ” ಎಂದರು.
ಇದೇ ಸಂದರ್ಭದಲ್ಲಿ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲರವರಿಗೆ ‘ನಾರಾಯಣಗುರು ಸಂಶೋಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು ಮತ್ತು ಅವರು ‘ಭಾರತದ ಸಂತ ಸತ್ವ ಮತ್ತು ನಾರಾಯಣಗುರುಗಳ ತತ್ವ’ ಈ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಪ್ರಶಸ್ತಿ ಪುರಸ್ಕೃತೆ ಲೇಖಕಿ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲರವರು ಮಾತನಾಡಿ “ತತ್ವಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಇಂದಿನ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಭಾರತೀಯ ಸಂತ ತತ್ವದ ಮಹತ್ವವನ್ನು ತಿಳಿದುಕೊಂಡು ಅರಿವಿನ ಹಾದಿಯಲ್ಲಿ ನಾವು ಮುನ್ನಡೆಯಬೇಕಾದ ಅಗತ್ಯತೆ ಇದೆ. ನನ್ನ ಕೃತಿಯನ್ನು ಓದಿ ಮನ್ನಣೆಯನ್ನು ಒದಗಿಸಿಕೊಟ್ಟಂತಹ ಮಂಗಳೂರು ವಿವಿಯ ನಾರಾಯಣ ಗುರು ಅಧ್ಯಯನ ಪೀಠಕ್ಕೆ ಕೃತಜ್ಞಳಾಗಿದ್ದೇನೆ” ಎಂದು ಹೇಳಿದರು.
ಕಾಟಿಪಳ್ಳ ನಾರಾಯಣ ಗುರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ದಯಕರ್, ನಾರಾಯಣ ಗುರು ಪೀಠದ ಸದಸ್ಯರಾದ ಶ್ರೀ ವಿಜಯಕುಮಾರ್ ಸೊರಕೆ, ನಮಿತಾ ಶಾಮ್, ಸಂಶೋಧನ ಸಹಾಯಕ ಡಾ. ರವಿರಾಜ್ ಉಪಸ್ಥಿತರಿದ್ದರು. ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಯಶು ಕುಮಾರ್ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಲ್ಲಿಕಾ ಭಾನುಪ್ರಕಾಶ್ ಮತ್ತು ಬಳಗದವರಿಂದ ‘ಸಂತ ಸತ್ವ ಪದ’ ನಡೆಯಿತು.
ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ :
ತುಳು, ಕನ್ನಡ ಭಾಷೆಯ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವ ಲೇಖಕಿ. ವಿಜ್ಞಾನ ಪದವೀಧರೆಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾದಂಬರಿ, ಸಂಶೋಧನೆ, ಅಂಕಣ ಬರಹ, ಕಥೆ, ನಾಟಕ, ಕವಿತೆ ಹೀಗೆ ಹೆಚ್ಚಿನ ಎಲ್ಲಾ ಪ್ರಕಾರಗಳ ಕೊಡುಗೆಯನ್ನು ನೀಡಿರುತ್ತಾರೆ. ತುಳುವಿನಲ್ಲಿ ಪಣಿಯಾರ, ಬಜಿಲಜ್ಜೆ, ಕೊಂಬು ಮತ್ತು ಚೌಕಿ ಎಂಬ ನಾಲ್ಕು ಕಾದಂಬರಿಗಳು, ‘ಚವಲೊ’ ಎನ್ನುವ ಕಥಾ ಸಂಕಲನ, ‘ರಡ್ಡ್ ಕವುಲೆ’ ಎನ್ನುವ ತುಳು ಅಂಕಣ ಬರಹಗಳ ಸಂಕಲನ ಮತ್ತು ‘ಮಮಿನದೊ’ ಎಂಬ ಕವನ ಸಂಕಲನ ಪ್ರಕಟಿತ. ಈ ಲೇಖಕಿಯು ಬರೆದ ನಾಟಿ ಔಷಧೀಯ ಪರಂಪರೆಯ ಬಗೆಗಿನ ಅಧ್ಯಯನ ಕೃತಿ ‘ಕಲ್ಪತರು’ ಮತ್ತು ತುಳುನಾಡಿನ ‘ಮೂರಿಗಳ ಆರಾಧನೆ’ ಎಂಬ ಸಂಶೋಧನಾ ಕೃತಿ ಅಪರೂಪದ ಅಮೂಲ್ಯ ಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇವುಗಳಲ್ಲದೆ ‘ಅಗ್ಗಿಷ್ಟಿಕೆ ಎಂಬ ಕನ್ನಡ ಕಥಾಸಂಕಲನ ಕೂಡ ಪ್ರಕಟಣೆ ಕಂಡಿದೆ. ಕನ್ನಡ ಮತ್ತು ತುಳುವಿನಲ್ಲಿ ‘ಬದಿ ಏತ್ ಕೊರ್ಪರ್’, ‘ಪುಂಚೊದ ಮಣ್ಣ್’, ‘ತತ್ರ್ ಮೋಸದ ಬಾಲೆ’, ‘ಚೇಕತ್ತಿ’ ಎನ್ನುವ ಅಪ್ರಕಟಿತ, ಬಹುಮಾನಿತ ನಾಲ್ಕು ನಾಟಕಗಳು ಇವರ ರಚನೆಗಳು. ಒಟ್ಟಾಗಿ ಹನ್ನೊಂದು ಕೃತಿಗಳು ಪಕಟಣೆಗೊಂಡು ಇದೀಗ ತುಳುವಿನಲ್ಲಿ ಕಾದಂಬರಿ ಮತ್ತು ವ್ಯಕ್ತಿ ಪರಿಚಯದ ಕೃತಿಗಳು ಪ್ರಕಟಣೆಗೆ ಸಿದ್ಧವಾಗುತ್ತಿವೆ. ತಮ್ಮ ಸಾಹಿತ್ಯ ಸೇವೆಗಾಗಿ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಲೇಖಕಿ, ಶ್ರೀಮತಿ ರಾಜಶ್ರೀ ಟಿ.ರೈ ಪೆರ್ಲ ಇವರು ಗಡಿನಾಡು ಕಾಸರಗೋಡಿನ ಕಾಟುಕುಕ್ಕೆ ಪೆರ್ಲದ ಗೃಹಿಣಿ. ಯುವ ಉದ್ಯಮಿ ಶ್ರೀ ತಾರಾನಾಥ ರೈ ಪಡ್ಡಂಬೈಲು ಗುತ್ತು ಅವರ ಪತ್ನಿ.