ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರುನಮನ ಮಾಡುವ ‘ವಂದೇ ಗುರುಪರಂಪರಾಮ್’ ಎಂಬ ಕಾರ್ಯಕ್ರಮವು ದಿನಾಂಕ 29 ನವೆಂಬರ್ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ “ಭರತನಾಟ್ಯ ಕಲಿಕೆಯು ಮಕ್ಕಳ ವ್ಯಕ್ತಿತ್ವವನ್ನು ತಿದ್ದುವುದಕ್ಕೆ ಸಹಾಯ ಮಾಡುತ್ತದೆ. ಡಿಜಿಟಲ್ ಯುಗದಲ್ಲಿ ಇಂತಹ ಕಲಾಪ್ರಕಾರಗಳ ಕಲಿಕೆ ಮಕ್ಕಳಿಗೆ ಅತ್ಯಗತ್ಯವಾಗಿದೆ. ಇದು ಕಲೆಯನ್ನು ಕಲಿಯುವ ಜೊತೆಗೆ ಗುರುಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನೂ ಬೋಧಿಸುತ್ತದೆ” ಎಂದು ಹೇಳಿದರು. ಶಾರದಾಮಣಿ ಶೇಖರ್ ಇವರ ಬಳಿ ಶಿಷ್ಯಂದಿರಾಗಿ ನೃತ್ಯ ಕಲಿತು ರಾಜ್ಯದ ಮತ್ತು ದೇಶದ ವಿವಿಧೆಡೆಗಳಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಿರುವ ನೃತ್ಯಗುರುಗಳು ಈ ಸಂದರ್ಭದಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದಲ್ಲದೆ, ಗುರುಪರಂಪರೆಯಲ್ಲಿ ಕಲಿತ ಪರಿಣಾಮವಾಗಿ ತಮ್ಮ ವ್ಯಕ್ತಿತ್ವವು ಅರಳಿದ ಬಗೆಯನ್ನು ವಿವರಿಸಿದರು.
ಕಾರ್ಯಕ್ರಮವನ್ನು ವಿದುಷಿ ಶಾರದಾಮಣಿ ಶೇಖರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನೃತ್ಯ ಗುರುಗಳಾದ ಸುಮಂಗಲಾ ರತ್ನಾಕರ್, ಭಾರತೀ ಸುರೇಶ್, ಶ್ರೀಲತಾ ನಾಗರಾಜ್, ಸುಮನ್‌ರಾಜ್ ಬಂಡೇಕರ್, ಪ್ರಮೋದ್ ಉಳ್ಳಾಲ್, ರೋಹಿಣಿ ಉದಯ್, ಉಮಾ ವಿಷ್ಣು ಹೆಬ್ಬಾರ್, ರಾಧಿಕಾ ಶೆಟ್ಟಿ, ಸೀಮಾ ಪ್ರಶಾಂತ್, ಮಂಜುಳಾ ಸುಬ್ರಹ್ಮಣ್ಯ, ಪೂಜಾ ಸಚಿನ್, ಸುಧೀರ್ ಪಿ., ಗೌರಿ ಶೈಲೇಶ್, ಸ್ವರ್ಣಗೌರಿ ಜೋಷಿ, ವಾಣಿಶ್ರೀ ವಿ., ಪ್ರತಿಭಾ ಎ. ಕುಮಾರ್, ಸ್ವರ್ಣ ಪ್ರತೀಕ, ಶ್ರವಣ ಕುಮಾರಿ, ಅಂಕಿತ ನೃತ್ಯ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ನಟ್ಟುವಾಂಗದಲ್ಲಿ ಪುತ್ತೂರಿನ ವಿದ್ವಾನ್ ಮಂಜುನಾಥ್, ಹಾಡುಗಾರಿಕೆಯಲ್ಲಿ ವಿನೀತ್ ಪುರವಾಂಕರ, ಮೃದಂಗದಲ್ಲಿ ಗೀತೇಶ್ ನೀಲೇಶ್ವರ, ಕೊಳಲಿನಲ್ಲಿ ಮುರಳೀಧರ್ ಕೆ. ಉಡುಪಿ ಸಹಕರಿಸಿದರು.
