ಮಂಗಳೂರು : ಸಂಸ್ಕಾರ ಭಾರತೀಯು ಕಳೆದ 21 ವರ್ಷಗಳಿಂದ ಗುರುಪೂರ್ಣಿಮೆಯಂದು ನಾಡಿನ ಹಲವಾರು ಹಿರಿಯ ಕಲಾವಿದರು. ಕಲಾ ಸಂಘಟಕರು, ಸಮಾಜ ಸೇವಕರನ್ನು ಗುರುತಿಸಿ, ಗೌರವಿಸುತ್ತಾ ಬಂದಿದೆ. ಪ್ರಸ್ತುತ ವರ್ಷ ದಿನಾಂಕ 10 ಜುಲೈ 2025ನೇ ಗುರುವಾರ ಐವರು ಹಿರಿಯ ಕಲಾ ಸಾಧಕರನ್ನು ಅವರ ವಿವಾಸಕ್ಕೆ ತೆರಳಿ ಗುರುನಮನ ಸಲ್ಲಿಸಲಾಗುವುದು. ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಜ್ಞಾತ ಕಲಾವಿದರು, ಶ್ರೇಷ್ಠ ಕಲಾ ಗುರುಗಳನ್ನು ಗುರುತಿಸಿ, ಸತ್ಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಗುರುನಮನ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು, ಸಮಾಜ ಸೇವಕರು, ಜನ ಪ್ರತಿನಿಧಿಗಳು, ಕಲಾಸಾಧಕರು ಮತ್ತು ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ. ನಿಟ್ಟೆ ಶಿಕ್ಷಣ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ಹಾಗೂ ಸನ್ಮಾನ ಪತ್ರ ನೀಡಿ ಗುರುನಮನ ಸಲ್ಲಿಸಲಾಗುವುದು.
ಸಾಧಕರ ವಿವರ :
1. ತುಳು ವಿದ್ವಾಂಸರಾದ ಶ್ರೀಮತಿ ಭವಾನಿ – ಜಾನಪದ (88 ವರ್ಷ) : ಸಾಂಪ್ರದಾಯಿಕವಾಗಿ ನೇಮ ಕಟ್ಟುವ ಪರಂಪರೆಯಿಂದ ಬಂದಿದ್ದು, ದೈವದ ಪಾಡ್ಡನದಲ್ಲಿ ವಿಶೇಷ ಅನುಭವವನ್ನು ಹೊಂದಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವಿರಲ್ಲದೆ, ಸೋಗೆ ಹೆಣೆಯುವಿಕೆ, ಚಾಪೆ ಹೆಣೆಯುವಿಕೆಯಲ್ಲದೇ ನೇಮಕಟ್ಟುವ ಎಲ್ಲಾ ದೈವಗಳ ಪಾಡ್ಡನ ಹಾಗೂ ಗದ್ದೆಯ ಪಾಡ್ಡನದ ಹಾಡು ಕವಿತೆಯಲ್ಲಿ ಪಳಗುವುದರೊಂದಿಗೆ, ಗಿಡಮೂಲಿಕೆಗಳ ಔಷಧಿ ಪರಿಣತಿಯನ್ನು ಹೊಂದಿ, 300ಕ್ಕೂ ಮಿಕ್ಕಿ ಆರೋಗ್ಯಕರ ಹೆರಿಗೆಯನ್ನು ನಡೆಸಿ ಜನಮಾನಸದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
2. ಕೆ. ವಿಶ್ವನಾಥ ಶೆಟ್ಟಿ – ಸಮಾಜಸೇವೆ (84 ವರ್ಷ) : ಎಂ.ಎ. ಸ್ನಾತಕೋತ್ತರ ಪದವೀಧರರಾಗಿ ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ತತ್ವಗಳನ್ನು ಮೈಗೂಡಿಸಿ, ಬಿ.ಎಂ.ಎಸ್.ನಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯದರ್ಶಿ ಹಾಗೂ ರಾಜ್ಯಾಧ್ಯಕ್ಷರಾಗಿ ಪ್ರಾಮಾಣಿಕ ಸೇವೆಗೈದು, ಬಿ.ಎಂ.ಎಸ್. ಸಂಯೋಜಿತ ಹಲವು ಯೂನಿಯನ್ ಗಳ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ, ಕನಿಷ್ಟ ವೇತನ ಸಮಿತಿಯ ಕಾಫಿ ಬೋರ್ಡ್ ಸದಸ್ಯನಾಗಿ, ದತ್ತೋಪಂಥ ಠೇಂಗಡಿ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯ 9 ಜಿಲ್ಲೆಗಳನ್ನೊಳಗೊಂಡ ರೀಜನಲ್ ಸಮಿತಿಯ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸಿ, ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಪ್ರದೇಶದ ಮಾಜಿ ರಾಜ್ಯಾಧ್ಯಕ್ಷರಾಗಿ ಮೆರೆದು ಜನಮನ್ನಣೆ ಪಡೆದು ಸಮಾಜ ಸೇವೆಯಲ್ಲೇ ತನ್ನನ್ನು ಮುಡಿಪಾಗಿಸಿಕೊಂಡಿರುವ ಧೀಮಂತ ಸಮಾಜ ಸೇವಕರಾಗಿ ವಿಶ್ವನಾಥ ಶೆಟ್ಟಿ ಗುರುತಿಸಿಕೊಂಡಿದ್ದಾರೆ.
3. ಗಿರಿಯಪ್ಪ ಇಡ್ಯಾ – ಮೇಕ್ ಅಪ್ (75 ವರ್ಷ) : ಅವಿಭಕ್ತ ಕೃಷಿ ಕುಟುಂಬದಲ್ಲಿ ಜನಿಸಿ, ಬಾಲ್ಯದಲ್ಲಿಯೇ ಸಂಘ ಪರಿವಾರದ ನಾಟಕಗಳು, ಯಕ್ಷಗಾನ ಬಯಲಾಟಗಳನ್ನು ಕಂಡು, ರಂಗಕಲೆಯಲ್ಲಿ ಆಸಕ್ತಿ ಹೊಂದಿ, ಪ್ರಾಥಮಿಕ ಹಂತದಲ್ಲಿ ರಂಗ ಪರಿಕರಕ್ಕೆ ಸಹಾಯಕರಾಗಿ ನಿಷ್ಣಾತಗೊಂಡು, ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ ನಾಟಕಗಳ ಪಾತ್ರಕ್ಕೆ ಪ್ರಸಾದನಕಾರರಾಗಿ ನಗರ, ಜಿಲ್ಲೆ, ರಾಜ್ಯಮಟ್ಟದಲ್ಲೂ ಕಲಾ ನೈಪುಣ್ಯತೆಯಲ್ಲಿ ಮೆರೆದು ಹಲವಾರು ಪ್ರಶಸ್ತಿ ಪುರಸ್ಕಾರದೊಂದಿಗೆ ‘ರಂಗಕರ್ಮಿ’, ‘ಮುಖವರ್ಣಿಕೆಯ ಮಾಂತ್ರಿಕ’, ‘ರಂಗ್ ಮಾಯಾಗಾರ’ ಎಂಬ ಬಿರುದಿಗೆ ಪಾತ್ರರಾಗಿ ಜನಮನ್ನಣೆ ಪಡೆದಿರುವ ಕಲಾ ತಪಸ್ವಿಯಾಗಿದ್ದಾರೆ.
4. ರಾಮ- ವಾದ್ಯ ಪರಿಕರ (72 ವರ್ಷ) : ಹತ್ತನೇ ಇಯತ್ತೆಯಲ್ಲೇ ವಾದನ ಪರಿಕರದಲ್ಲಿ ಆಸಕ್ತಿಗೊಂಡು, ಪ್ರಸಿದ್ಧ ನಾಗಸ್ವರ ವಾದಕ ಸುಬ್ಬು ಸೇರಿಗಾರ ಬಾಂದೊಟ್ಟು, ಲೋಕು ಸೇರಿಗಾರ ಹಳೆಯಂಗಡಿ, ಎಕ್ಕಾರು ನಾಗಪ್ಪ ಸೇರಿಗಾರ, ಮೊರ್ಕೋಡಿ ತಮ್ಮು ಸೇರಿಗಾರ, ಬಜ್ಜೆ ಬ್ಯಾಂಡ್ ಮಾಸ್ಟರ್ ಆಲ್ಬರ್ಟ್ ಮುಂತಾದವರ ಗರಡಿಯಲ್ಲಿ ಪಳಗಿ ತಾಸೆ, ಡೋಲು, ಸ್ತುತಿ, ಸೈಡ್ ಡ್ರಮ್ ಮೊದಲಾದ ಪರಿಕರಗಳಲ್ಲಿ ಕಲಾಸೇವೆಗೈಯ್ದು ನಿಷ್ಠೆ-ಶೃದ್ಧಾ-ಭಕ್ತಿಯನ್ನು ಮೈಗೂಡಿಸಿರುವ ಶ್ರೇಷ್ಠ ಕಲಾ ಸಾಧಕ ರಾಮ ಅವರನ್ನು ಸನ್ಮಾನಿಸಲಾಗುವುದು.
5. ಪಿ. ಸುರೇಶ್ ಕಾಮತ್- ಯಕ್ಷಗಾನ (62 ವರ್ಷ) : ಬಾಲ್ಯದಲ್ಲಿಯೇ ಕೋಟಲೆಯಿಂದ ದೃಷ್ಟಿಹೀನತೆಯನ್ನು ಹೊಂದಿದ ತಾವು ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿ, ಅಜ್ಜಿಯ ಪ್ರೇರಣೆಯಿಂದ ಯಕ್ಷಗಾನ ಕಲೆಯಲ್ಲಿ ಆಸಕ್ತಿಗೊಂಡು ಕರ್ನಾಟಕ, ಧರ್ಮಸ್ಥಳ, ಸುರತ್ಕಲ್, ಕಟೀಲು ಮೇಳಗಳಲ್ಲಿ ಚಕ್ರತಾಳ ವಾದಕರಾಗಿ ತಿರುಗಾಟವನ್ನು ನಡೆಸಿರುವಿರಲ್ಲದೇ ಮಂಗಳೂರು ಪುರಭವನದಲ್ಲಿ ನಡೆಯುತ್ತಿದ್ದ ಯಕ್ಷಗಾನ ದಿಗ್ಗಜರ ಕಾರ್ಯಕ್ರಮದಲ್ಲೂ ಪಾಲ್ಗೊಂಡು, ಪರಿಸರದಲ್ಲಿ ನಡೆಯುವ ಹಲವಾರು ಸಂಘ-ಸಂಸ್ಥೆಗಳ ತಾಳಮದ್ದಳೆಗೆ ಚೆಂಡ ಹಾಗೂ ಮದ್ದಳೆಯ ಪೂರಕ ವಾದಕರಾಗಿ ಸಹಕರಿಸುವುದರೊಂದಿಗೆ ಭಜನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಯಾವುದೇ ಫಲಾಪೇಕ್ಷೆಯನ್ನು ಬಯಸದೇ ಕಲೆಯ ಮೇಲಿನ ಅನನ್ಯ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿ ಜನಾನುರಾಗಿಯಾಗಿದ್ದಾರೆ.