ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳಲ್ಲೊಂದಾದ ‘ಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿ ಪ್ರಶಸ್ತಿ’ಗೆ ಕನ್ನಡ ಹೋರಾಟಗಾರ ಗುರುದೇವ ನಾರಾಯಣ ಕುಮಾರ ಮತ್ತು ಲೇಖಕಿ ಡಿ.ಬಿ. ರಜಿಯಾ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಪಾರ ಗೌರವದಿಂದ ಮೈಸೂರಿನ ಡಾ. ಎ. ಪುಷ್ಪ ಅಯ್ಯಂಗಾರ್ ಅವರು ‘ಸತ್ಯವತಿ ವಿಜಯರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿ’ಗಳ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಇರಿಸಿದ್ದಾರೆ. ಕನ್ನಡ ನಾಡು, ನುಡಿ, ಜಲ ಕುರಿತ ಚಿಂತಕರು, ಕನ್ನಡ ಪರ ಹೋರಾಟಗಾರರು ಅಥವಾ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಇಬ್ಬರಿಗೆ ಪ್ರತಿ ವರ್ಷ ಪುರಸ್ಕಾರ ನೀಡಬೇಕೆಂಬುದು ದತ್ತಿದಾನಿಗಳ ಆಶಯ.
2024ನೆಯ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗುರುದೇವ್ ನಾರಾಯಣ ಕುಮಾರ್ ಕನ್ನಡ ಧೀಮಂತ ಚಳುವಳಿಗಾರ ಜಿ. ನಾರಾಯಣ ಕುಮಾರ್ ಇವರ ಮಗ. ತಂದೆಯ ಮಾರ್ಗದರ್ಶನದಲ್ಲಿ ಚಳವಳಿಗೆ ಬಂದ ಅವರು ಹಲವು ಕನ್ನಡಪರ ಹೋರಾಟಗಳನ್ನು ಸಂಘಟಿಸಿ ನಾಡು-ನುಡಿ ಹಿತ ಕಾಪಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಬಳ್ಳಾರಿ ಜಿಲ್ಲೆ ಹಿರೇಹಾಳ್ ನವರಾದ ಡಿ.ಬಿ. ರಜಿಯಾ ಕವಿತೆ ಮತ್ತು ಕಥಾ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದವರು. ‘ಛಾಯೆ’, ‘ಕಳೆದು ಹೋಗುತ್ತೇವೆ’ ಅವರ ಪ್ರಮುಖ ಕವನ ಸಂಕಲನಗಳಾದರೆ ‘ವಾಸ್ತವದ ಕನವರಿಕೆ’ ಅವರ ಪ್ರಮುಖ ಕಥಾ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ ಕೂಡ ಸೇವೆ ಸಲ್ಲಿಸಿರುವ ಇವರಿಗೆ ಹಲವು ಸಂಘ ಸಂಸ್ಥೆಗಳ ಪುರಸ್ಕಾರಗಳು ಲಭಿಸಿವೆ.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕಶವಾಗಿ ಪರಿಶೀಲಿಸಿ ಗುರುದೇವ ನಾರಾಯಣಕುಮಾರ ಲೇಖಕಿ ಡಿ.ಬಿ. ರಜಿಯಾ ಇವರನ್ನು ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಭಾಗವಹಿಸಿದ್ದರು.