ಕಾಸರಗೋಡು : ಸಾಹಿತಿ, ಭಾಷಾಂತರಕಾರ, ಸಮಾಜಸೇವಕ ಕೆ.ವಿ. ಕುಮಾರನ್ ಮಾಸ್ತರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ‘ಗುರುನಮನ’ ಹಾಗೂ ‘ಕನ್ನಡ ಭವನ ಅಭಿನಂದನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ವಿದ್ಯಾನಗರದಲ್ಲಿರುವ ಅವರ ಸ್ವಗೃಹ ಸುಪ್ರಭದಲ್ಲಿ ದಿನಾಂಕ 28 ಜುಲೈ 2024ರಂದು ಜರಗಿತು.
ಹಲವು ಕನ್ನಡದ ಕಾದಂಬರಿಗಳನ್ನು ಮಲಯಾಲಕ್ಕೆ ಅನುವಾದಿಸಿದ ಕೆ.ವಿ. ಕುಮಾರನ್ ಇವರಿಗೆ ‘ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಘೋಷಿಸಿದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಲಾಗಿತ್ತು. ಅಭಿನಂದನೆ ಸ್ಚೀಕರಿಸಿ ಮಾತನಾಡಿದ ಅವರು “ಅನುವಾದದಿಂದ ಅನುಭವ ವಿಸ್ತಾರಗೊಳ್ಳುತ್ತದೆ. ಇತರ ಭಾಷಾ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವಾಗುತ್ತದೆ. ನಾನು ಕನ್ನಡವನ್ನು ಸ್ವಪರಿಶ್ರಮದಿಂದ ಕರಗತ ಮಾಡಿಕೊಂಡವನು. ಅದು ಕೇವಲ ಒಂದು ಭಾಷೆಯಲ್ಲ ಅದೊಂದು ಉದಾತ್ತವಾದ ಸಂಸ್ಕೃತಿ” ಎಂದರು.
ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪತ್ರಕರ್ತ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣಗೈದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕೇಂದ್ರೀಯ ವಿ.ವಿ. ಪ್ರೋಫೆಸರ್ ಮುತ್ತು ಸ್ವಾಮಿ ಮುತ್ತುಕುಮಾರ್, ಲೇಖಕ ನಾರಾಯಣ ಅಮ್ಮಂಗೋಡು ಮುಖ್ಯ ಅತಿಥಿಗಳಾಗಿದ್ದರು. ಗೀತಾ ಚಂದ್ರಮೋಹನ್, ಗೀತಾ ಕುಮಾರನ್, ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್, ಜಗನ್ನಾಥ ಶೆಟ್ಟಿ, ಜಯ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು.