ತೆಕ್ಕಟ್ಟೆ: ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ‘ಗುರುವಂದನಾ ಕಾರ್ಯಕ್ರಮ’ವು ತೆಕ್ಕಟ್ಟೆ ಹಯಗ್ರೀವದಲ್ಲಿ 22 ಜುಲೈ 2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕೃಷ್ಣಯ್ಯ ಆಚಾರ್ ಬಿದ್ಕಲ್ ಕಟ್ಟೆ, ಲಂಬೋದರ ಹೆಗಡೆ ನಿಟ್ಟೂರು, ಶ್ರೀಮತಿ ಶಾರದಾ ಹೊಳ್ಳ, ಗಿರೀಶ್ ಆಚಾರ್ ವಕ್ವಾಡಿ, ಅಮೃತಾ ಉಪಾಧ್ಯ, ವಿ. ಸುಂದರಂ, ಸುಧೀರ್ ತಲ್ಲೂರು ಈ ಎಲ್ಲಾ ಗುರುವನ್ನು ಶಿಷ್ಯರನ್ನೊಡಗೂಡಿಕೊಂಡು ಅಭಿನಂದಿಸಿದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ “ಮನುಷ್ಯರಾಗಿ ಹುಟ್ಟಿದ್ದೇವೆ. ನಮ್ಮ ಜೀವನ ಸುಗಮವಾಗಿ ನಡೆಯಬೇಕಾದರೆ ಮಾನಸಿಕವಾದ ನೆಮ್ಮದಿಗಾಗಿ ಯಾವುದಾದರೂ ಒಂದು ಕಲೆ ಬೇಕೇ ಬೇಕು. ಆದರೆ ಈಗಿನ ಸಮಾಜದಲ್ಲಿ ಕಲೆಯಿಂದಲೇ ಬದುಕುತ್ತೇವೆ ಎಂದು ಹೊರಡಬೇಡಿ. ಅದು ಪ್ರಸ್ತುತ ಕಾಲಘಟ್ಟದಲ್ಲಿ ಕಷ್ಟ. ನಮಗೆ ಗುರು ಒಬ್ಬನೇ ಅಲ್ಲ. ವೇದಿಕೆಯನ್ನು ಹಂಚಿಕೊಡುವವನೂ ಗುರುವೇ. ವೇದಿಕೆಯ ಬಗೆಗೂ ಹೆದರಿಕೆ ಬೇಕು. ಹೆದರಿಕೆ ಇದ್ದರೆ ಮಾತ್ರ ಬೆಳೆಯುವುದಕ್ಕೆ ಸಾಧ್ಯ. ಗುರುವಿನಿಂದಲೇ ವೇದಿಕೆ ಪಡೆಯುತ್ತೀರಿ, ಗುರುವಿನಿಂದಲೇ ಕಲಿಯುತ್ತೀರಿ, ಗುರುವಿನಿಂದಲೇ ಬೆಳೆಯುತ್ತೀರಿ. ಗುರುವಿನಲ್ಲಿನ ಕಲೆಯನ್ನು ಮಾತ್ರ ಗುರುತಿಸಬೇಕು. ಆ ಗುರುವಿನ ಬಗೆಗೆ ಭಕ್ತಿ ಬೇಕು. ಜೀವನ ಎನ್ನುವುದು ಬರುವುದು, ಹೋಗುವುದು ಅಲ್ಲ. ಇರುವುದನ್ನು ಸ್ವೀಕರಿಸಬೇಕು. ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ಸಂಸ್ಥೆಯ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿ.” ಎಂದು ಗುರು ಸಂಜೀವ ಸುವರ್ಣ ಬನ್ನಂಜೆ ಶುಭನುಡಿಯನ್ನಾಡಿದರು.
ಸಂಗೀತ ಗುರು ಶ್ರೀಮತಿ ಶಾರದಾ ಹೊಳ್ಳ ಮಾತನಾಡಿ “ಮಕ್ಕಳ ಆಸಕ್ತಿಯನ್ನು ಗುರುತಿಸಿ, ಪೋಷಕರು ಕಲೆಯಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬೇಕು. ಸಂಸ್ಥೆಯ ಸಾಂಸ್ಕೃತಿಕ ರಾಯಭಾರಿಯಾಗಿ ಕಲೆಯನ್ನು ಬೆಳೆಸುವಲ್ಲಿ ಸಮಾಜಕ್ಕೆ ಆಸ್ತಿಯಾಗಬೇಕು. ಇಂತಹ ಸಂಸ್ಥೆಗೆ ಪೋಷಕರು ಬೆಂಬಲವಾಗಿ ನಿಂತು ಮುನ್ನಡೆಸಲು ಸಹಕಾರಿಯಾಗಬೇಕು. ಮಕ್ಕಳ ಮನೋವಿಕಾಸವನ್ನು ವೃದ್ಧಿಸುವ ಕೆಲಸ ಕಲೆಯಿಂದಾಗುತ್ತದೆ.” ಎಂದರು.
ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕೇಂದ್ರದ ಶಿಷ್ಯರಿಂದ ಕೊರ್ಗಿ ಶಂಕರನಾರಾಯಣ ಉಪಾಧ್ಯರ ಗುರುವಂದನಾ ಗೀತೆಗೆ ನೃತ್ಯರೂಪಕ ರಂಗದಲ್ಲಿ ಪ್ರಸ್ತುತಿಗೊಂಡಿತು.