ಬೆಂಗಳೂರು: ಸಾಮಾನ್ಯವಾಗಿ ನೃತ್ಯಕಲಾವಿದರು ಸಶ್ರಮದಿಂದ ಬಹುಕಾಲ ಸೂಕ್ತ ನೃತ್ಯ ತರಬೇತಿಯನ್ನು ಪಡೆದು, ಅವರು ಅರ್ಜಿಸಿದ ವಿದ್ಯೆಯನ್ನು ಕಲಾರಸಿಕರ ಮುಂದೆ ಅನಾವರಣಗೊಳಿಸಲು ಹಲವು ಸಂದರ್ಭಗಳಿರುತ್ತವೆ. ‘ರಂಗಪ್ರವೇಶ’ವನ್ನು ವಿದ್ಯುಕ್ತವಾಗಿ ನೆರವೇರಿಸಿಕೊಳ್ಳುವ ಮುನ್ನ ಉತ್ತಮ ಮುಹೂರ್ತವನ್ನು ನೋಡಿ ಗುರುಗಳ ಮುಖೇನ ‘ಗೆಜ್ಜೆಪೂಜೆ’ ಮಾಡಿಸಿಕೊಂಡು ವೇದಿಕೆಯ ಮೇಲೆ ನೃತ್ಯಕಾರ್ಯಕ್ರಮವನ್ನು ಪ್ರಸ್ತುತಪಡಿಸುವುದು ಸಂಪ್ರದಾಯ. ಆನಂತರ ‘ರಂಗಪ್ರವೇಶ’ ಮಾಡಿ ತದನಂತರ ವಿದ್ಯಾಧಾರೆ ಎರೆದ ಗುರುಗಳಿಗೆ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ‘ಗುರುವಂದನಾರ್ಪಣೆ’ ಸಲ್ಲಿಸಿ, ನರ್ತನ ಮಾಡುತ್ತಾರೆ. ಇಂಥ ಒಂದು ಸದಾವಕಾಶ ಸಾಧನೆಯ ಪಥದಲ್ಲಿರುವ ನೃತ್ಯಕಲಾವಿದೆ ಮೇಘನಾ ಪಾಲಿಗೆ ಇದೀಗ ಒಲಿದು ಬಂದಿದೆ.
ಶ್ರೀ ಯೋಗ ನರಸಿಂಹರಾವ್ ಹಾಗೂ ಪಾರ್ವತಿ ಅವರ ಪುತ್ರಿಯಾದ ಮೇಘನಾ ವೈ. ರಾವ್ ಸಾಕಷ್ಟು ಕಾಲ ಪರಿಶ್ರಮಿಸಿರುವ ಭರತನಾಟ್ಯ ಪರಿಣತ ನೃತ್ಯಕಲಾವಿದೆ. ತನ್ನ 5ರ ಎಳವೆಯಲ್ಲೇ ಡಾ. ಲಕ್ಷ್ಮೀ ಎನ್. ಮೂರ್ತಿ, ಡಾ. ಸ್ವರೂಪ ಲಕ್ಷ್ಮೀ ಹಾಗೂ ವಿದುಷಿ ಮಂಜು ಭೈರವಿ ಅವರಲ್ಲಿ 20ಕೂ ಹೆಚ್ಚಿನ ವರ್ಷಗಳು ನೃತ್ಯಾಭ್ಯಾಸ ಮಾಡಿದವರು. ಮುಂದೆ ಗುರು ಶ್ರುತಿ ಗೋಪಾಲ್ ಅವರಲ್ಲಿ ಹೆಚ್ಚಿನ ಕಲಿಕೆ ಮುಂದುವರಿಸಿ, 2008ರಲ್ಲೇ ರಂಗಪ್ರವೇಶವನ್ನು ಮುಗಿಸಿದ್ದು, ಭಾರತದಾದ್ಯಂತ ಸುಮಾರು 500ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ಮತ್ತು ಪ್ರದರ್ಶನಗಳನ್ನು ನೀಡಿರುವವರು. ಉತ್ತಮ ಕಲಾವಿದೆ, ನೃತ್ಯಗುರು, ಭರತನಾಟ್ಯ ಹಾಗೂ ಕಾನ್ಟೆಂಪೋರರಿ ಶೈಲಿಗಳಲ್ಲಿ ಅನೇಕ ನೃತ್ಯರೂಪಕಗಳ ಸಂಯೋಜಕಿ ಕೂಡ. ಸಂಗೀತ ಮತ್ತು ಯೋಗಪಟುವಾಗಿರುವ ಮೇಘನಾ, ಕರ್ನಾಟಕ ಸರ್ಕಾರದ ಜ್ಯೂನಿಯರ್, ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕ ಗಳಿಸಿರುವುದು ವಿಶೇಷ.
ಇದೀಗ ನಗರದ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ದಿನಾಂಕ 11-11-2023ರ ಶನಿವಾರ ಸಂಜೆ 4 ಗಂಟೆಗೆ ತಮ್ಮ ‘ಗುರು ವಂದನಾ’ ಕಾರ್ಯಕ್ರಮವನ್ನು ಅರ್ಪಿಸಲಿದ್ದಾರೆ. ಕಲಾವಿದೆಯ ಸೊಬಗಿನ ನೃತ್ಯದೈಸಿರಿಯನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
ಕರ್ನಾಟಕ ಸಂಗೀತದಲ್ಲೂ ಪರಿಶ್ರಮಿಸಿರುವ ಮೇಘನಾ ಉತ್ತಮ ಯೋಗಪಟು. ಅನೇಕ ಯೋಗ-ನೃತ್ಯ ಕಾರ್ಯಾಗಾರಗಳನ್ನು ನಡೆಸಿರುವ ಅನುಭವಿ. ದಕ್ಷಿಣ ಭಾರತದ ಚಲನಚಿತ್ರದಲ್ಲೂ ಶಾಸ್ತ್ರೀಯ ನೃತ್ಯವನ್ನು ಮಾಡಿರುವ ಇವರು ಕೇರಳದ ಗುರುವಾಯೂರು,ವೆಲ್ಲೂರು ಲಕ್ಷೀ ದೇವಾಲಯ, ತಮಿಳುನಾಡು, ಮೌಂಟ್ ಅಬು, ಬೆಂಗಳೂರಿನ ಇಸ್ಕಾನ್ ಮುಂತಾದ ಅನೇಕ ದೇವಾಲಯಗಳಲ್ಲಿ ನೃತ್ಯಸೇವೆ ಸಲ್ಲಿಸಿದ್ದಾರೆ.
ಇವರ ನೃತ್ಯಸಾಧನೆಗಾಗಿ ಅನೇಕ ಪ್ರಶಸ್ತಿಗಳು ಹಿಂಬಾಲಿಸಿ ಬಂದಿವೆ. ಕಲಶ, ಕೀರ್ತಿಶ್ರೀ, ಉದ್ಘೋಷಕಿ ಗುರುನಮನ, ಉತ್ತಮ ನಟನಗಾರ್ತಿ, ಪ್ರತಿಭಾ ಪುರಸ್ಕಾರ, ಕರ್ನಾಟಕ ಯೂತ್ ಎಕ್ಸಲೆನ್ಸಿ ಅವಾರ್ಡ್ ( 17 ನೆಯ ವಯಸ್ಸಿನಲ್ಲಿ ನೃತ್ಯ-ಯೋಗ, ಸಂಗೀತ ಮತ್ತು ಮಾರ್ಷಿಯಲ್ ಆರ್ಟ್ ಸಾಧನೆ) ಜೈವಿಕ್ ಪ್ರಶಸಿ, ಪ್ರತಿಭಾ ಪುರಸ್ಕಾರ ( ಅಂಡರ್ ಗ್ರಾಜ್ಯುಯೇಟ್ ಮೆಡಿಸಿನ್ ಕೋರ್ಸ್ ನಲ್ಲಿ ಪ್ರಥಮ ರ್ಯಾಂಕ್ ಗಳಿಕೆ) ಮುಂತಾದವು.
ಬೆಂಗಳೂರಿನ ಜಿಗಣಿ ಯೋಗಸಂಸ್ಥೆಯಲ್ಲಿ ಯೋಗ ತರಬೇತಿ-ಪ್ರಮಾಣಪತ್ರ, ಭಾರತೀಯ ವೈದ್ಯಪದ್ಧತಿ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿಷಯದಲ್ಲಿ ಬ್ಯಾಚುಲರ್ ಪದವಿ, ಡಬ್ಲಿನ್- ಟ್ರಿನಿಟಿ ಕಾಲೇಜಿನಿಂದ ಟ್ರಾನ್ಸ್ಲೇಶನಲ್ ಆನ್ಕಾಲಜಿಯಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ, ತಮಿಳುನಾಡು- ತಂಜಾವೂರಿನ ತಮಿಳ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ‘ಎಂ.ಎ.’ ಪದವಿ ಮುಂತಾದವುಗಳನ್ನು ಪಡೆದಿರುವ ಈ ಬಹುಮುಖ ಪ್ರತಿಭೆಯ ಆಯಾಮಗಳು ಶ್ಲಾಘನೀಯ ಎಂದರೆ ಅತಿಶಯೋಕ್ತಿಯಲ್ಲ.
ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.