ಕೋಟ : ಕರ್ಣಾಟಕ ಯಕ್ಷಧಾಮ ಮಂಗಳೂರು, ಸಾಲಿಗ್ರಾಮ ಮಕ್ಕಳ ಮೇಳ ಕೋಟ, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಂದನೆ, ಸಾಧಕ ದಂಪತಿಗಳಿಗೆ ಸನ್ಮಾನ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ದಿನಾಂಕ 07 ಸೆಪ್ಟೆಂಬರ್ 2025ರಂದು ಕೋಟ ಶ್ರೀ ಹಂದೆ ಮಹಾಗಣಪತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ಮಕ್ಕಳು ಕಂಪ್ಯೂಟರ್ ಗೊಂಬೆಗಳಾಗಿದ್ದಾರೆ, ಸನಾತನ ಶ್ರದ್ಧೆ, ನಂಬಿಕೆ ದೂರವಾಗಿದೆ. ಅವರಲ್ಲಿ ಧಾರ್ಮಿಕ ತತ್ವಗಳನ್ನು ಬೆಳೆಸಿ ಸನಾತನ ಸಂಸ್ಕೃತಿಯನ್ನು ಉಳಿಸಬೇಕಾಗಿದೆ, ಯಕ್ಷಗಾನದ ಆಸಕ್ತಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಅರಳಿಸಬಲ್ಲದು” ಎಂದರು.
ಈ ಸಂದರ್ಭದಲ್ಲಿ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಶಿ ಮಂಗಳೂರು ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಾಧಕರಾದ ಪ್ರಗತಿಪರ ಕೃಷಿಕ, ಹೈನುಗಾರ, ಸಮಾಜ ಸೇವಕ ಕುಪ್ಪಾರು ಅನಂತ ಉಡುಪ – ಲಕ್ಷ್ಮಿ ಉಡುಪ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಹೆಚ್. ಶ್ರೀಧರ ಹಂದೆ, ವೇದಮೂರ್ತಿ ರಾಮಕೃಷ್ಣ ಕೆದಿಲಾಯ ತೆಕ್ಕಟ್ಟೆ, ಹಂದೆ ದೇವಳದ ಆಡಳಿತ ಮೊಕ್ತೇಸರ ಹೆಚ್. ಅಮರ ಹಂದೆ, ಮಹಾಬಲೇಶ್ವರ ಕೆದಿಲಾಯ, ಹಾರ್ಯಾಡಿ ಉಪಸ್ಥಿತರಿದ್ದರು.
ಕಾವ್ಯ ಹಂದೆ ಪ್ರಾರ್ಥಿಸಿ, ರಘುಪ್ರಸಾದ ಕೆದಿಲಾಯ, ಹಾರ್ಯಾಡಿ ಅಭಿನಂದನಾ ಮಾತುಗಳನ್ನಾಡಿದರು. ಡಾ. ಜಿ. ವೈಕಂಠ ಹೇರ್ಳೆ ಸನ್ಮಾನಿತರನ್ನು ಪರಿಚಯಿಸಿದರು. ಹೆಚ್. ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿ, ವಿನಿತ ಹಂದೆ, ರಶ್ಮಿ ಪ್ರಸಾದ್, ಅಶೋಕ್ ಉಡುಪ ಸಹಕರಿಸಿದರು. ಕರ್ಣಾಟಕ ಯಕ್ಷಧಾಮದ ಹೆಚ್. ಜನಾರ್ದನ ಹಂದೆ ವಂದಿಸಿದರು. ನಂತರ ಖ್ಯಾತ ಕಲಾವಿದರಿಂದ ‘ಶರಸೇತು ಬಂಧನ’ ಯಕ್ಷಗಾನ ತಾಳಮದ್ದಲೆ ನಡೆಯಿತು.