ಮಂಗಳೂರು : ರಾಗತರಂಗ ಮಂಗಳೂರು ವತಿಯಿಂದ ‘ಝೇಂಕಾರ-2024’ ಹಾಗೂ ಗುರುವಂದನಾ ಕಾರ್ಯಕ್ರಮ ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ 04-02-2024ರ ರವಿವಾರ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರಿನ ‘ಝೇಂಕಾರ ಗಾನ ಕಲಾ ಕೇಂದ್ರ’ದ ನಿರ್ದೇಶಕಿ ಹಾಗೂ ಸಂಗೀತ ಶಿಕ್ಷಕಿ ಜಯಶ್ರೀ ಅರವಿಂದ್ ಅವರಿಗೆ ಗುರುವಂದನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ರೀಡಾಭಾರತಿ ಹಾಗೂ ಪಟ್ಲ ಫೌಂಡೇಶನ್ ಮಂಗಳೂರು ವಲಯದ ಕಾರ್ಯದರ್ಶಿ ಎ. ಕೃಷ್ಣ ಶೆಟ್ಟಿ ತಾರೆಮಾರ್ ಮಾತನಾಡಿ “ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಕಿರಿಯರಿಗೂ ತಿಳಿಯಪಡಿಸಲು ತೊಡಗಿಸಿಕೊಂಡಿರುವ ಕಾರ್ಯ ಶ್ಲಾಘನೀಯ.” ಎಂದರು.
ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಜಿಲ್ಲಾ ಉಸ್ತುವಾರಿ ಸುದೇಶ್ ಶೆಟ್ಟಿ ಕೊಡಿಯಾಲಬೈಲು ಮಾತನಾಡಿ “ರಾಗತರಂಗ ಮಕ್ಕಳ ಪ್ರತಿಭೆ ಗುರುತಿಸಿ, ವೇದಿಕೆ ನೀಡಿ, ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ.” ಎಂದರು. ಕಾರ್ಯಕ್ರಮದಲ್ಲಿ ರಾಗತರಂಗದ ಗೌರವಾಧ್ಯಕ್ಷ ಡಾ. ದೇವರಾಜ್, ಪ್ರಮುಖರಾದ ಸೌಮ್ಯ ರಾವ್, ಸುಂದರ್ ಪಟೇಲ್, ಪುಷ್ಪಾ ಜೋಗಿ ಉಪಸ್ಥಿತರಿದ್ದರು.
ರಾಗತರಂಗದ ಅಧ್ಯಕ್ಷೆ ಆಶಾಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶಶಿಧರ್ ಸ್ವಾಗತಿಸಿ, ಮಮತಾ ರಾಜೀವ್ ಹಾಗೂ ಡಾ. ಕೃಷ್ಣಪ್ರಭ ನಿರೂಪಿಸಿ, ಕಾರ್ಯದರ್ಶಿ ಪಿ.ಸಿ. ರಾವ್ ವಂದಿಸಿದರು. ಬಾಲಪ್ರತಿಭೆಗಳಿಂದ ಶಾಸ್ತ್ರೀಯ ಸಂಗೀತ, ಭರತನಾಟ್ಯ, ವಾದ್ಯಸಂಗೀತ, ಸುಗಮ ಸಂಗೀತ, ಕುಣಿತ ಭಜನೆ ಹಾಗೂ ಯಕ್ಷನೃತ್ಯ ಪ್ರದರ್ಶನಗಳು ನಡೆದವು.