ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನ..| ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರ ಮಾರಿ ತೊಳೆದೇನ..|| ಎಂಬ ಹಾಡು ಯಾರಿಗೆ ತಾನೇ ನೆನಪಿಲ್ಲ?. ಇದನ್ನ ಎಂದಾದರೂ ಮರೆಯಲು ಸಾಧ್ಯವೇ.? ಈ ಜನಪದ, ಬಾಲ ಸಾಹಿತ್ಯದ ಶಕ್ತಿ ಅಂಥದು. ಈ ಬಾಲ ಸಾಹಿತ್ಯ ಎನ್ನುವುದು ಬಹು ವಿಶಾಲವಾದ ಸಾಗರ , ಹೇರಳವಾದ ವ್ಯಾಪ್ತಿಯನ್ನು ಹೊಂದಿದೆ. ಚಿಕ್ಕಪುಟ್ಟ ಮಕ್ಕಳ ಬುದ್ಧಿಮಟ್ಟಕ್ಕೆ ಇಳಿದು ಕವಿಗಳು , ಸಾಹಿತಿಗಳು ಮಕ್ಕಳ ಸದಭಿರುಚಿಗೆ ತಕ್ಕಂತೆ ಪ್ರಮುಖವಾಗಿ ಆದಿಪ್ರಾಸ , ಮಧ್ಯಪ್ರಾಸ , ಅಂತ್ಯಪ್ರಾಸ ಪದಗಳ ಬಳಕೆ ಮಾಡಿ ಮಕ್ಕಳ ಪದ್ಯ ರಚಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಶ್ರೀಮತಿ ಗೀತಾ ಎನ್. ಮಲ್ಲನಗೌಡರ್ ಮಾಡಿದ ಪ್ರಯತ್ನ ತುಂಬಾ ಮೆಚ್ಚುವಂತಹದು. ಈ ಪ್ರಯತ್ನದ ಫಲವೇ ಇಂದು ಲೋಕಾರ್ಪಣೆಗೊಂಡ “ಹಾರುವ ಹಕ್ಕಿ” ಎಂಬ ಶಿಶು ಗೀತೆಗಳ ಸಂಕಲನ. ಇಂತಹ ಒಂದು ಕೃತಿಯನ್ನು ಕವಯಿತ್ರಿ ಕನ್ನಡ ಸಾರಸತ್ವ ಲೋಕಕ್ಕೆ ಓದಲು ಕಾಣಿಕೆಯಾಗಿ ನೀಡಿದ್ದು ತುಂಬಾ ಸಂತಸದಾಯಕ ಹಾಗೂ ಹೆಮ್ಮೆಯ ವಿಚಾರ. ನಮ್ಮ ನಾಡಿನ ಮೆಚ್ಚಿನ ಹಿರಿಯ ಸಾಹಿತಿಗಳು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀಯುತ ತಮ್ಮಣ್ಣ ಬೀಗಾರ್ ಇವರು ಚಂದವಾದ ಮುನ್ನುಡಿ ಬರೆದು ಕವಯತ್ರಿಯನ್ನು ಪ್ರೇರೇಪಿಸಿದ್ದಾರೆ. ಹಾಗೆಯೇ “ಹಾರುವ ಹಕ್ಕಿ” ಈ ಕೃತಿಗೆ ಮತ್ತೊಬ್ಬ ನಮ್ಮ ನಾಡಿನ ಹಿರಿಯ ಕವಿ, ಕಥೆಗಾರರು, ಸಾಹಿತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಶ್ರೀಯುತ ವೈ. ಜಿ. ಭಗವತಿ (ಕಲಘಟಗಿ) ಇವರು ಅರ್ಥಪೂರ್ಣವಾದ ಬೆನ್ನುಡಿಯನ್ನು ಬರೆದು ಕವಯಿತ್ರಿಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
“ಹಾರುವ ಹಕ್ಕಿ ” ಈ ಮಕ್ಕಳ ಕವನ ಸಂಕಲನವು ಒಟ್ಟು 65 ಮಕ್ಕಳ ಪದ್ಯಗಳನ್ನು ಒಳಗೊಂಡಿದೆ. ಈ ಪದ್ಯಗಳು ರೈತರ ಬದುಕು , ಶಾಲೆಯ ಪರಿಸರ , ಹೊಲಗದ್ದೆ ತೋಟಗಳು , ಪರಿಸರ ಪ್ರೇಮ , ಪ್ರಾಣಿ ಪಕ್ಷಿಗಳು, ಚಂದ್ರ, ಆಕಾಶ , ಚಿಟ್ಟೆ , ಅಮ್ಮನ ಅಂತ:ಕರಣ, ಹೆತ್ತವರ ಅಳಲು ಇತ್ಯಾದಿ ಅನೇಕ ವಿಷಯಗಳನ್ನು ಕುರಿತು ರಚಿಸಿದ ಪದ್ಯಗಳಾಗಿವೆ. ಲೇಖಕರು ಮಕ್ಕಳ ಮನದ ತಲ್ಲಣಗಳ, ಮಿಡಿಯುವ ಹೃದಯಗಳ ಭಾವನೆಗಳನ್ನು ಬಹಳ ಚೆನ್ನಾಗಿ ಅರಿತು ಅಚ್ಚುಕಟ್ಟಾಗಿ ಕವಿತೆಗಳನ್ನು ರಚಿಸಿದ್ದಾರೆ.
ಕವಯಿತ್ರಿ ಸ್ವತಃ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಪ್ರಯುಕ್ತ ಮಕ್ಕಳ ಮನವನ್ನು ಗೆಲ್ಲುವಲ್ಲಿ ಬಹಳ ಸಮಯ ತೆಗೆದುಕೊಳ್ಳದೆ ಸಫಲರಾಗಿದ್ದಾರೆ. ಅವರ ಈ ಕೃತಿಯು “ನಮ್ಮ ಶಾಲೆ ” ಎಂಬ ಪದ್ಯದೊಂದಿಗೆ ಪ್ರಾರಂಭವಾಗುತ್ತದೆ. ಜ್ಞಾನವೊಂದೇ ಕತ್ತಲೆಯನ್ನು ಹೊಡೆದು ಓಡಿಸುವ ಅಸ್ತ್ರ , ವಿದ್ಯೆಯೇ ಬಾಳಿಗೆ ಬೆಳಕು ಎನ್ನುತ್ತಾ ಮಕ್ಕಳನ್ನು ಶಾಲೆಗೆ ಕರೆತರುವ ಕವನವು ಓದುಗರ ಮನಸ್ಸನ್ನು ಸೆಳೆಯುತ್ತದೆ.
ತುಂತುರು ಮಳೆ ಬರುವ ಕಾಲಕ್ಕೆ ಆಕಾಶದಲ್ಲಿ ಕಾಣುವ ಕಾಮನಬಿಲ್ಲನು ನೋಡಿದ ಮಕ್ಕಳಲ್ಲಿ ಉಂಟಾಗುವ ಪ್ರಶ್ನೆಗಳನ್ನು ಕುರಿತು ಬರೆದ ಪದ್ಯ “ಬಣ್ಣ ತುಂಬಿದವರು ಯಾರು? ” ಗಮನಾರ್ಹ.
ರೆಕ್ಕೆ ಬಿಚ್ಚಿ ಮೇಲೆ ಗಗನದಿ ಹಾರುವ ಹಕ್ಕಿಗಳು ತಮ್ಮ ಪಯಣದಲ್ಲಿ ಸುತ್ತಲೂ ಕಂಡು ನೋಡಿ ಸಂತೋಷ ಪಟ್ಟ ವಿಷಯಗಳಾದ ನದಿಗಳು, ತಾರೆಗಳು, ಚಂದ್ರ, ಬೆಳ್ಳಿ ಚುಕ್ಕಿಗಳು, ನಾಡಿನ ಪ್ರವಾಸಿ ತಾಣಗಳ ಬಗ್ಗೆ ಚೆನ್ನಾಗಿ ಚಿತ್ರಿಸಿದ್ದಾರೆ.
ಹಕ್ಕಿಗಳ ಉಪಮೇಯದ ಮೂಲಕ ಹೆತ್ತವರ ಸಂಕಟ, ಕಷ್ಟಗಳನ್ನು ಸೊಗಸಾಗಿ ಬಿಂಬಿಸಿದ ಕವಿತೆಯೂ ಇದೆ. ಇಷ್ಟೇ ಅಲ್ಲದೆ ವಿಭಿನ್ನ ರೀತಿಯ ಪದ್ಯಗಳಾದ ‘ಬೇಸಿಗೆಯ ಬಿಸಿಲು’,’ ಗುಬ್ಬಿಮರಿ ಬೆಳೆಯಲಿ ಹಬ್ಬಿ’, ‘ಬಣ್ಣದ ಲೋಕದ ಚಿಣ್ಣರು’, ‘ಅಕ್ಕಿ-ಹಕ್ಕಿ’, ‘ನಾಗರ ಪಂಚಮಿ’, ‘ದೇವ ಜೀವ’, ‘ತಿಂಗಳ ಬೆಳಕಿನ ಚಂದಮಾಮ’, ‘ಶಾಲೆ ಮಂದಿರ’, ‘ಮೋಡ ನೀ.. ಓಡಬೇಡ’, ‘ಕಾ.. ಕಾ.. ಕಾಗೆಮರಿ’, ‘ಅರಳುವ ಹೂಗಳು’, ‘ಬೆಳ್ಳಿಮೋಡ’, ‘ಕಂದ ನೀ ನಡೆ ಜ್ಞಾನದ ಬೆಳಕಿನ ಕಡೆಗೆ’, ‘ಒಲವು ಜ್ಯೋತಿ’, ‘ಅಮ್ಮ ದೇವರು’, ‘ಕಾಣುವುದಾದರೆ ಕಾಣು ಕನಸು’, ಮತ್ತು ಕನ್ನಡ ಭಾಷೆಯ ಕುರಿತಾದ ಅಭಿಮಾನ ಕೆರಳಿಸುವ ‘ಬೆಳೆಯುತಿರು.. ಬೆಳಗುತಿರು’ ಎಂಬ ಪದ್ಯ, ಹಾಗೂ ‘ಒಂದೇ ತೋಟದ ಹೂಗಳು’, ‘ಹಸಿರು ತೋರಣ’, ನೆಲ ಜಲವ ಕುರಿತಾಗಿ ಬರೆದ ‘ನೆಲದ ವೈಭವ’, ರಾಷ್ಟ್ರ ಅಭಿಮಾನ ಉಕ್ಕಿಸುವ ಪದ್ಯವಾದ ‘ನಮ್ಮ ಧ್ವಜವು ಹೆಮ್ಮೆಯ ಧ್ವಜವು’, ‘ಮುದ್ದು ಗಿಳಿ ಪುಟ್ಟಿ ಆಸೆ’, ‘ಬಾನಚಂದಿರ’, ‘ಸಂಕ್ರಾಂತಿ’ ಹೀಗೆ 65 ಪದ್ಯಗಳಲ್ಲಿ ಕೆಲವು ಪದ್ಯಗಳು ಒಂದೇ ಭಾವದ ಪದ್ಯಗಳಾಗಿ ಪುನರಾವರ್ತಿವೆ ಎನಿಸಿದರೂ ಮಕ್ಕಳಿಗೆ ಹಾಡು ಕಲಿಯಲು ಈ ಪುಸ್ತಕವು ಉಪಯುಕ್ತ ಎನಿಸುತ್ತದೆ.
ಈ ಕೃತಿಯಲ್ಲಿ ಪರಿಸರ ಪ್ರೇಮಿ, ವೃಕ್ಷ ಮಾತೆ, ಸಾಲು ಸಾಲು ಮರಗಳನ್ನು ನೆಟ್ಟ ಸಾಲುಮರದ ತಿಮ್ಮಕ್ಕನ ಕುರಿತಾದ ಪದ್ಯವು ‘ಹಸಿರೇ ಉಸಿರು’ ಎಂಬ ಸಂದೇಶವವು ಹೇಳುವುದರ ಮೂಲಕ ಗಮನ ಸೆಳೆಯುತ್ತದೆ.
ಮಕ್ಕಳ ಸಾಹಿತ್ಯದಲ್ಲಿ ಇನ್ನು ಹೆಚ್ಚಿನ ಅಧ್ಯಯನ ಮಾಡಿ ಛಂದಸ್ಸು, ಲಯ, ಆದಿ ಪ್ರಾಸ, ಅಂತ್ಯಪ್ರಾಸ, ಯತಿ ಇವುಗಳ ಕಡೆಗೆ ಹೆಚ್ಚು ಹೆಚ್ಚು ಆದ್ಯತೆ ನೀಡಿದರೆ ಕವಯಿತ್ರಿ ಗೀತಾ ಎನ್. ಅವರಿಂದ ಮುಂದಿನ ದಿನಗಳಲ್ಲಿ ಈ ಕೃತಿಗಿಂತಲೂ ಶ್ರೇಷ್ಠವಾದ ಕೃತಿಗಳು ಹೊರ ಬರುವವು ಎಂಬ ಭರವಸೆ ನನಗಿದೆ. ಮಕ್ಕಳ ಲೋಕಕ್ಕೆ ಓದುಗರನ್ನು ಕರೆದೊಯ್ಯುವ ಇಂತಹ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಕವಿ ಗೀತಾ. ಎನ್. ಮಲ್ಲನಗೌಡರ್ ಇವರಿಗೆ ಮತ್ತೊಂದು ಬಾರಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಕನ್ನಡದ ಅಭಿಮಾನಿಗಳಾದ ತಾವೆಲ್ಲರೂ ಈ ಕೃತಿಯನ್ನು ಕೊಂಡು ಓದಿ ಲೇಖಕರನ್ನು ಪ್ರೋತ್ಸಾಹಿಸಿ , ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವಿರೆಂದು ಆಶಿಸುತ್ತೇನೆ….
ವಿಮರ್ಶೆ – ಈರಪ್ಪ ಬಿಜಲಿ. ಕೊಪ್ಪಳ.
ಮೊ.ಸಂ: 7019181570.
ಕವಿ/ ಲೇಖಕರು : ಗೀತಾ. ಎನ್. ಮಲ್ಲನಗೌಡರ್
ಮೊ.ಸಂ : 9380030211.
ಪ್ರಕಾಶನ : ಕಪ್ಪತ್ತಗಿರಿ. ಪ್ರಕಾಶನ. ಪೋ : ಕಳಸಾಪುರ. ತಾ / ಜಿ : ಗದಗ.
ಬೆಲೆ :120. ರೂ. ಗಳು.