ಪುತ್ತೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ತ್ರಿಂಶೋತ್ಸವದ ಅಂಗವಾಗಿ ಅರ್ಪಿಸುವ ‘ನೃತ್ಯಾಮೃತ -5’ ಸರಣಿ ನೃತ್ಯ ಕಾರ್ಯಕ್ರಮವು ದಿನಾಂಕ 23-06-2024ರಂದು ಸಂಜೆ 3-30 ಗಂಟೆಗೆ ಪುತ್ತೂರು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ.
ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ಪುತ್ತೂರು ದರ್ಬೆಯ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಇವರ ‘ನೃತ್ಯಾಂತರಂಗ -112’ ಕಾರ್ಯಕ್ರಮದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ವಾಸ್ತು ಇಂಜಿನಿಯರ್ ಮತ್ತು ಪುತ್ತೂರಿನ ನಗರ ಸಭಾ ಸದಸ್ಯರಾದ ಶ್ರೀ ಪಿ.ಜಿ. ಜಗನ್ನಿವಾಸ ರಾವ್ ಇವರು ಉದ್ಘಾಟಿಸಲಿದ್ದು, ಯಕ್ಷಗಾನ ಕಲಾವಿದ ಅರ್ಥಧಾರಿ ಶ್ರೀ ಹರೀಶ ಬಳಂತಿಮೊಗರು ಅವರ ಅಧ್ಯಕ್ಷತೆಯಲ್ಲಿ ‘ಹಾಡೊಂದು ಭಾವ ಹಲವು’ ಕಾರ್ಯಕ್ರಮ ಜರುಗಲಿದೆ.
ಪುತ್ತೂರಿನ ವಿಶ್ವಕಲಾ ನಿಕೇತನ ನೃತ್ಯ ಶಾಲೆಯ ನಿರ್ದೇಶಕಿ ವಿದುಷಿ ನಯನ ವಿ. ರೈ, ನೃತ್ಯಾಂಜಲಿ ಜ್ಯೋತಿಗುಡ್ಡೆಯ ನಿರ್ದೇಶಕಿ ವಿದುಷಿ ಮಲ್ಲಿಕಾ ವೇಣುಗೋಪಾಲ್, ಕೃಷಿಕರಾದ ಶ್ರೀಮತಿ ಚಿತ್ರಾ ಭಿಡೆ ಹಾಗೂ ನಾಟ್ಯಾರಾಧನಾದ ಹಿರಿಯ ವಿದ್ಯಾರ್ಥಿ ವಿದ್ವಾನ್ ಶೋಧನ್ ಕುಮಾರ್ ಬಿ. ಇವರುಗಳು ಗೌರವ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
ಉದ್ಘಾಟನೆಯ ಬಳಿಕ ವಿದುಷಿ ಸುಮಂಗಲಾ ರತ್ನಾಕರ ರಾವ್,ಮಂಗಳೂರು, ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ವಿದುಷಿ ಅನು ಧೀರಜ್ ಬೆಂಗಳೂರು, ವಿದುಷಿ ಅಕ್ಷತಾ ಕೆ. ಪುತ್ತೂರು ಹಾಗೂ ಕು. ಧರಿತ್ರಿ ಭಿಡೆ ಕಲ್ಮಂಜ ಇವರಿಂದ ಒಂದೇ ಸಾಹಿತ್ಯಕ್ಕೆ ವಿವಿಧ ಆಯಾಮಗಳಲ್ಲಿ ನಡೆಯುವ ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆಯೆಂದು ನಾಟ್ಯಾರಾಧನಾ ಕಲಾಕೇಂದ್ರದ ಟ್ರಷ್ಠಿಗಳಾದ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಶ್ರೀ ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಮತ್ತು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಶ್ರೀ ದೀಪಕ್ ಕುಮಾರ್ ತಿಳಿಸಿದ್ದಾರೆ.