ಪುತ್ತೂರು : ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಇದರ ತ್ರಿಂಶೋತ್ಸವದ ಅಂಗವಾಗಿ ನಡೆದ ‘ನೃತ್ಯಾಮೃತ’ ಸರಣಿ ನೃತ್ಯ ಕಾರ್ಯಕ್ರಮಗಳ ಅಂಗವಾಗಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಇದರ ‘ನೃತ್ಯಾಂತರಂಗ’ ಸರಣಿ ಕಾರ್ಯಕ್ರಮದ ಸಹಯೋಗದೊಂದಿಗೆ ನಡೆದ ‘ಹಾಡೊಂದು ಭಾವ ಹಲವು’ ಕಾರ್ಯಕ್ರಮವು ದಿನಾಂಕ 23-06-2024ರಂದು ಪುತ್ತೂರಿನ ಶಶಿಶಂಕರ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ತಾಳಮದ್ದಳೆಯ ಅರ್ಥಧಾರಿ ಶ್ರೀ ಹರೀಶ ಬಳಂತಿಮೊಗರು “ಭರತನಾಟ್ಯ ಕಲೆಯಲ್ಲಿ ಒಂದೇ ಹಾಡಿಗೆ ಹಲವು ದೃಷ್ಟಿಕೋನಗಳಲ್ಲಿ ರಂಗ ಪ್ರಸ್ತುತಿ ನೀಡಿದ ಪ್ರಯತ್ನ ಶ್ಲಾಘನೀಯ. ಇಂತಹ ಪ್ರಸ್ತುತಿಗಳಾದಾಗ ಕಲೆ ಶ್ರೀಮಂತವಾಗಿ ಬೆಳೆಯುತ್ತದೆ.” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ನಗರಸಭಾ ಸದಸ್ಯ ಹಾಗೂ ವಾಸ್ತು ಶ್ರೀ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ ಹೊಸ ಕಲ್ಪನೆಯನ್ನು ಭರತನಾಟ್ಯದಲ್ಲಿ ರೂಪಿಸಿದ ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದರು.
ನೃತ್ಯ ಕಾರ್ಯಕ್ರಮದಲ್ಲಿ ವಿದುಷಿ ಅಕ್ಷತಾ ಕೆ. (ನೆರೆಮನೆಯ ಗೋಪಿಕೆಯಾಗಿ- ವಾತ್ಸಲ್ಯ), ಕುಮಾರಿ ಧರಿತ್ರಿ ಭಿಡೆ (ಕೃಷ್ಣನ ಪ್ರೇಮಿಯಾಗಿ- ಶೃಂಗಾರ), ವಿದುಷಿ ಶ್ರೀಮತಿ ಅನು ಧೀರಜ್ (ಮುಗ್ಧ ಬಾಲೆಯಾಗಿ- ಕೌತುಕ), ವಿದ್ವಾನ್ ಶ್ರೀ ಬಿ. ದೀಪಕ್ ಕುಮಾರ್ (ಹದಿಹರೆಯದ ಗೊಲ್ಲ- ಕೃಷ್ಣ ಸಖ್ಯ), ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ ರಾವ್ (ತತ್ವಜ್ಞಾನಿಯಾಗಿ) ಶ್ರೀ ಪುರಂದರದಾಸ ವಿರಚಿತ ಸುಪ್ರಸಿದ್ಧ ‘ಪಿಳ್ಳಂಗೋವಿಯ ಚೆಲ್ವ ಕೃಷ್ಣನ’ ಎಂಬ ಸಾಹಿತ್ಯಕ್ಕೆ ರಂಗ ಪ್ರಸ್ತುತಿ ನೀಡಿದರು.
ಹಿಮ್ಮೇಳದಲ್ಲಿ ವಿದುಷಿ ಪ್ರೀತಿಕಲಾ ದೀಪಕ್ ಪ್ರತಿಯೊಬ್ಬರ ಭಾವಕ್ಕನುಗುಣವಾಗಿ ನೃತ್ಯ ನಿರ್ದೇಶಕರ ಇಂಗಿತದಂತೆ ಬೇರೆ ರಾಗ ಹಾಗೂ ತಾಳಗಳಲ್ಲಿ ಹಾಡಿ ನೃತ್ಯದ ಭಾವಕ್ಕೆ ಜೀವ ನೀಡಿದರು. ಶ್ರೀ ಶ್ಯಾಮ ಭಟ್ಟರು ಮೃದಂಗದಲ್ಲಿ ಮತ್ತು ಶ್ರೀ ಕೃಷ್ಣ ಗೋಪಾಲ್ ಪೂಂಜಾಲಕಟ್ಟೆ ಕೊಳಲಿನಲ್ಲಿ ಸಹಕರಿಸಿದ್ದರು. ವಿದುಷಿ ಸುಮಂಗಲಾ ರತ್ನಾಕರ ರಾವ್ ಹಾಗೂ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಟುವಾಂಗದಲ್ಲಿ ಸಹಕರಿಸಿದ್ದರು.
ಪುತ್ತೂರಿನ ವಿಶ್ವಕಲಾ ನಿಕೇತನದ ಹಿರಿಯ ಗುರು ವಿದುಷಿ ನಯನ ವಿ. ರೈ ಕುದ್ಕಾಡಿ, ಕಲಾ ಪ್ರೇಕ್ಷಕಿ ಚಿತ್ರಾ ಭಿಡೆ, ನೃತ್ಯಾಂಜಲಿ ಜ್ಯೋತಿಗುಡ್ಡೆಯ ನಿರ್ದೇಶಕಿ ವಿದುಷಿ ಮಲ್ಲಿಕಾ ವೇಣುಗೋಪಾಲ್ ಹಾಗೂ ನಾಟ್ಯಾರಾಧನಾದ ಹಿರಿಯ ವಿದ್ಯಾರ್ಥಿ ವಿದ್ವಾನ್ ಶೋಧನ್ ಕುಮಾರ್ ಬಿ. ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ನಾಟ್ಯಾರಾಧನಾದ ಟ್ರಷ್ಟಿ ಶ್ರೀ ಬಿ. ರತ್ನಾಕರ ರಾವ್ ಹಾಗೂ ಮೂಕಾಂಬಿಕಾ ನೃತ್ಯ ಸಂಸ್ಥೆಯ ಗಿರೀಶ್ ಕುಮಾರ್ ಪುತ್ತೂರು, ಶ್ರೀಮತಿ ಶಶಿಪ್ರಭಾ ಬಿ. ಉಪಸ್ಥಿತರಿದ್ದರು. ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿ, ಆರಾಧ್ಯ, ಅಭಿಜ್ಞಾ ಹಾಗೂ ಜನ್ಯ ಪ್ರಾರ್ಥಿಸಿ, ಅವನಿ ರೈ, ಪೂರ್ವಿ ಬಿ.ಸಿ., ಅಕ್ಷತಾ, ಧನ್ವಿ ಹಾಗೂ ವೈಭವಿ ಕಲಾವಿದರನ್ನು ಪರಿಚಯಿಸಿ, ಕುಮಾರಿ ವೃಂದಾ ರಾವ್ ಕಾರ್ಯಕ್ರಮ ನಿರೂಪಿಸಿ, ವಿದ್ವಾನ್ ದೀಪಕ್ ಕುಮಾರ್ ವಂದಿಸಿದರು.
1 Comment
Beautiful coverage by roovari. Your support to art is great 🙏☺thank you