18-04-2023,ಉಡುಪಿ: ಹೆಣ್ಣು ಈ ಸಮಾಜದ ಕಣ್ಣು ಎನ್ನುವುದು ರೂಢಿಯ ಮಾತು. ಆದರೆ ಆಕೆ ತನ್ನೊಡಲಿನ ಅವಮಾನಗಳನ್ನು ಮರೆಯಲ್ಲಿ ಮುಚ್ಚಿ, ಮರೆಯಲಾಗದ ನೋವುಗಳನ್ನು ಸೆರಗಿನಲ್ಲಿ ಬಚ್ಚಿಟ್ಟು, ನಗುವ ಮುನ್ನ ಅಳುವ ನುಂಗಿ ಮೌನದ ಸೆರೆಮನೆಯಲ್ಲಿ ಮತ್ತೆ ಮತ್ತೆ ಬಂಧಿಯಾಗುತ್ತಿದ್ದಾಳೆ..! ಇಂತಹ ಬಂಧನಗಳ ಪೊರೆ ಕಳಚಿ ಆಕಾಶದೆತ್ತರಕ್ಕೆ ರೆಕ್ಕೆ ಬಿಚ್ಚಿ ಸ್ವಚ್ಛಂದದಿ ಹಾರುವಂತೆ ಮಾಡಬೇಕಾದವರಾರು? ಎನ್ನುವ ಪ್ರಶ್ನೆಗೆ ಆತ್ಮಶೋಧನೆಯನ್ನು ತಮ್ಮ ತಮ್ಮಲ್ಲಿ ಮಾಡಿಕೊಳ್ಳುವಂತೆ ಮಾಡಿದ್ದು ಇತ್ತೀಚಿಗೆ ಬ್ರಹ್ಮಾವರದ ಎಸ್. ಎಂ. ಎಸ್. ಕಾಲೇಜಿನಲ್ಲಿ ನಡೆದ ವಿಶಿಷ್ಟ ಏಕವ್ಯಕ್ತಿ ರಂಗಪ್ರಯೋಗ ಹಕ್ಕಿ ಮತ್ತು ಅವಳು.
ಒಂದು ಹೆಣ್ಣಿನ ಸೂಕ್ಷ್ಮ ಸಂವೇದನೆಗಳನ್ನು ಕಾವ್ಯಾಭಿನಯದ ಮೂಲಕ ಅಭಿವ್ಯಕ್ತಿಸಿ, ಪ್ರೇಕ್ಷಕರನ್ನು ಸೆಳೆಯುವುದು ದೊಡ್ಡ ಸವಾಲು. ಈ ಸವಾಲನ್ನು ಸುಲಭವಾಗಿ ರಂಗಭಾಷೆಯ ಮೂಲಕ ಪ್ರಸ್ತುತ ಪಡಿಸಿದ ರೀತಿ ಇಲ್ಲಿ ಅಭೂತಪೂರ್ವವಾದುದ್ದು. ಈ ಏಕವ್ಯಕ್ತಿ ರಂಗಾಭಿನಯದಲ್ಲಿ ಕುಮಾರಿ ಕಾವ್ಯ ಹಂದೆ ಎಚ್ ತನ್ನ ಪ್ರಬುದ್ಧ ಅಭಿನಯದ ಮೂಲಕ ನಾಟಕದ ಆಶಯವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾಳೆ. ಕಾವ್ಯ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎಸ್ಸಿ ಪದವಿ ಓದುತ್ತಿರುವ ವಿದ್ಯಾರ್ಥಿನಿ. ಈಕೆ ಬಾಲ್ಯದ ದಿನಗಳಲ್ಲಿ ಮನೆಯಂಗಳದಲ್ಲಿ ಯಕ್ಷಗಾನ ಕಲಿತು, ಭರತನಾಟ್ಯ, ರಂಗಭೂಮಿ, ಸಿನಿಮಾ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಕಲಿಕೆಯಲ್ಲೂ ಸೈ ಎನಿಸಿಕೊಂಡವಳು. ಹಾಗಾಗಿ ಸುಮಾರು ಒಂದೂವರೆ ಗಂಟೆಗಳಲ್ಲಿ,ನೃತ್ಯ, ಯಕ್ಷಗಾನದಂತಹ ಭಿನ್ನ ಭಿನ್ನ ಕಲಾ ಪ್ರಕಾರಗಳನ್ನು ಪೋಣಿಸಿದ ಈ ರಂಗ ವಿನ್ಯಾಸವನ್ನು ಸುಲಲಿತವಾಗಿ ಅಭಿನಯಿಸಿ, ಪ್ರೇಕ್ಷಕರನ್ನು ಹಿಡಿದಿಟ್ಡುಕೊಂಡು, ವಿವಿಧ ಪಾತ್ರಗಳನ್ನು ನಿರ್ವಹಿಸಿದ ಪರಿ ಅನನ್ಯವಾದುದು .
ಪ್ರತಿ ಬಾರಿ ಕಥಾ ಹಂದರ ಬದಲಾದಾಗಲೂ ಪ್ರೇಕ್ಷಕನಿಗೆ ಏಕವ್ಯಕ್ತಿ ಅಭಿನಯ ಎಂದೆನಿಸಲಿಲ್ಲ..! ಕಾವ್ಯಳ ಅಂತಹ ಅದ್ಭುತ ಅಭಿನಯ ಪ್ರತಿಯೊಬ್ಬ ಪ್ರೇಕ್ಷಕನಿಗೂ ಅಚ್ಚರಿ ಮೂಡಿಸುವಂತೆ ಮಾಡಿದೆ.
ವಿದೇಶಿ ಮಹಿಳೆಯಾಗಿ, ಮನೆಯಾಕೆಯಾಗಿ, ಸೀತೆಯಾಗಿ, ಅಡುಗೆಮನೆಯ ಹುಡುಗಿಯಾಗಿ, ದಾಕ್ಷಿಯಿಣಿಯ ಅರ್ಧನಾರೀಶ್ವರನಾಗಿ, ಹೆಣ್ಣು ಗಂಡು ಸರಿಸಮಾನರು ಎಂಬ ಸಂದೇಶ ಕೊಟ್ಟಿರುವುದು ಮಾತ್ರವಲ್ಲದೇ, ಹೆಣ್ಣಿನ ಬಗೆ ಬಗೆಯ ಸವಾಲುಗಳನ್ನೂ, ವೇದನೆಗಳನ್ನೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿ ಪ್ರೇಕ್ಷಕರ ಹೃದಯನ್ನು ತಟ್ಟಿದ್ದಾರೆ.
ಕನ್ನಡದಲ್ಲಿನ ಮತ್ತು ಕನ್ನಡಕ್ಕೆ ಅನುವಾದಿಸಿದ ಕವನ, ಕತೆ, ಪ್ರಬಂಧಗಳನ್ನು ಆಧರಿಸಿದ ಈ ಕಾವ್ಯ ಪ್ರಯೋಗದ ರಂಗದಾಟ ವಿಭಿನ್ನವಾದುದ್ದು.
ಕೆ.ವಿ.ತಿರುಮಲೇಶ್, ಮಿತ್ರಾ ವೆಂಕಟರಾಜ್, ಪ್ರತಿಭಾ ನಂದಕುಮಾರ್,ಚಿಮಮಾಂಡ, ಮಾಯಾ ಎಂಜಲೋ, ಲತೇಶಾ, ವೈದೇಹಿ,ಅಭಿಲಾಷ ಎಸ್. ಮುಂತಾದ ಶ್ರೇಷ್ಠ ಸಾಹಿತಿಗಳ ಕತೆ ಕವಿತೆ ಪ್ರಬಂಧಗಳನ್ನ ಹಾಗೂ ಸುಧಾ ಆಡುಕಳ,ಜ. ನಾ ತೇಜಶ್ರೀ, ಕಾವ್ಯಶ್ರೀ ಇವರೆಲ್ಲರು ಅನುವಾದಿಸಿದ ಕೆಲವು ಪಠ್ಯಗಳನ್ನು ರಂಗಪಠ್ಯವನ್ನಾಗಿ ಪೋಣಿಸಿ, ಸ್ತ್ರೀ ಸಂವೇದನೆಗಳಿಗೆ ಹೊಸ ರೂಪು ಕೊಟ್ಟಿರುವುದು ಪ್ರೇಕ್ಷಕನ ಪ್ರಜ್ಞೆಯನ್ನು ಎಚ್ಚರಿಸುವಂತೆ ಮಾಡಿದೆ.
ಈ ಏಕವ್ಯಕ್ತಿ ರಂಗಪ್ರಯೋಗವನ್ನ ಬಹುಮುಖಿ ವ್ಯಕ್ತಿತ್ವದ ಈ ನಾಡಿನ ಶ್ರೇಷ್ಠ ನಿರ್ದೇಶಕರಾದ ಡಾ ಶ್ರೀಪಾದ ಭಟ್ ಅವರು ನಿರ್ದೇಶಿಸಿದ್ದಾರೆ. ಅವರು ಈ ಕಾವ್ಯಾಭಿನಯದ ರಂಗ ಕುಸುರಿಯನ್ನ ಬಹಳ ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ.ಡಾ ಶ್ರೀಪಾದ ಭಟ್ ಅವರ ಅನೇಕ ಏಕವ್ಯಕ್ತಿ ನಾಟಕಗಳಲ್ಲಿ ಇದು ಕೂಡ ಅತ್ಯುತ್ತಮ ನಾಟಕವಾಗಿದೆ. ಇವರೊಂದಿಗೆ ಸ್ವರ್ಣ ಪ್ರಭು ಸಹ ಕೈ ಜೋಡಿಸಿದ್ದಾರೆ. ಬೆಳಕಿನ ಮಾಂತ್ರಿಕ ರಾಜು ಮಣಿಪಾಲ ಅವರ ಬೆಳಕಿನ ಮಾಯಾಜಾಲ ಮತ್ತು ಅದಕ್ಕೆ ತಕ್ಕಂತಿರುವ ನಭಾ ಒಕ್ಕುಂದ, ಇವರ ಕಲೆ, ಅನುಷ್ ಶೆಟ್ಟಿ , ಮುನ್ನಾ ಮೈಸೂರು ಅವರ ಮಾಧುರ್ಯದ ಸಂಗೀತ, ಅಲ್ಲಲ್ಲಿ ಎದುರಾಗುವ ಹಿನ್ನೆಲೆ ಧ್ವನಿಯ ಸಂಭಾಷಣೆ , ಕಾವ್ಯ ಪ್ರಭು ಅವರ ತಾಂತ್ರಿಕ ನಿರ್ವಹಣೆ ಇವೆಲ್ಲವೂ ಪ್ರೇಕ್ಷಕರನ್ನು ರಂಗದ ಪರಿಧಿಯಲ್ಲಿ ಬಂಧಿಸಿತ್ತು.
ಇಂತಹದೊಂದು ಅಪರೂಪದ ಅಪೂರ್ವ ಅವಕಾಶವನ್ನು ಪ್ರೇಕ್ಷಕರಿಗೆ ಒದಗಿಸಿಕೊಟ್ಟಿದ್ದು ಸುವಿಕಾ ಸಾಂಸ್ಕೃತಿಕ ಸಂಘಟನೆ,ಕೋಟ ಹಾಗೂ ಜೊತೆಯಲ್ಲಿ ಸಹಕಾರ ನೀಡಿದ್ದು ದಿಮ್ಸಾಲ್ ನಾಟಕ ಶಾಲೆ, ಸಾಲಿಕೇರಿ. ಈ ಎರಡೂ ಸಂಸ್ಥೆಗಳು, ಕಳೆದ ಕೆಲವು ವರ್ಷಗಳಿಂದ ಆಧುನಿಕ ಜಗತ್ತಿನ ಜಂಜಾಟಗಳಲ್ಲಿ ಕಳೆದು ಹೋಗುತ್ತಿರುವ ಯುವ ಮನಸ್ಸುಗಳನ್ನು ಅರಳಿಸುವ ಮತ್ತು ಒಡೆದು ಹೋಗುತ್ತಿರುವ ಹೃದಯಗಳನ್ನು ಮತ್ತೆ ಬೆಸೆಯುವ ಕೆಲಸವನ್ನು ಮಾಡುತ್ತಾ, ಸಾಹಿತ್ಯ, ಸಂಗೀತ, ಲಲಿತ ಕಲೆ, ಮಕ್ಕಳ ಬೇಸಿಗೆ ಶಿಬಿರ ಹಾಗೂ ವಿವಿಧ ರಂಗ ತರಬೇತಿ ಮುಂತಾದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿವೆ.
ಈ ವಿಭಿನ್ನ ಏಕವ್ಯಕ್ತಿ ರಂಗಪ್ರಯೋಗ ಇನ್ನಷ್ಟು ಪ್ರದರ್ಶನ ಕಂಡು ಸಮಾಜವನ್ನು ಬಡಿದೆಬ್ಬಿಸಲಿ, ಕಾವ್ಯಳ ಪ್ರತಿಭೆಗೆ ತಕ್ಕಂತೆ ಯಶಸ್ಸಿನ ಹೆಜ್ಜೆಗಳನ್ನು ಈ ರಂಗದಲ್ಲಿ ಇನ್ನಷ್ಟು ಮೂಡಿಸುವಲ್ಲಿ ಸಹಕಾರಿ ಆಗಲಿ .
ಖ್ಯಾವೋಸ್ ಪತಂಗ ಪರಿಣಾಮ ಸಿದ್ಧಾಂತ ಹೇಳುವಂತೆ ‘ ಎಲ್ಲೋ ಬಡಿಯುವ ಚಿಟ್ಟೆಯ ರೆಕ್ಕೆಗಳು ಮತ್ತೆಲ್ಲೋ ಬಿರುಗಾಳಿ ಎಬ್ಬಿಸುವುದು’ ಎಂಬ ನಂಬಿಕೆ ಸುಳ್ಳಾಗುವುದಿಲ್ಲ ಎಂಬುದನ್ನು ಈ ರಂಗ ಪ್ರಯೋಗ ಸಾಬೀತು ಪಡಿಸಿದೆ.
ಇಂತಹ ಏಕವ್ಯಕ್ತಿ ರಂಗಪ್ರಯೋಗಗಳ ಮೂಲಕ ಜಾಗೃತಿ ಮೂಡಿ, ಸಮಾಜದ ಪ್ರತಿ ಸ್ತ್ರೀಯೂ ತನ್ನೆಲ್ಲಾ ಕ್ಷೇತ್ರದಲ್ಲೂ ಬಂಧನ ಮುಕ್ತಗೊಳ್ಳಲಿ, ಸದಾ ರೆಕ್ಕೆ ಬಿಚ್ಚಿ ಗಗನದೆಡೆಗೆ ಹಾರುವಂತಾಗಲಿ, ಪ್ರತಿಯೊಬ್ಬರು ತಮ್ಮೊಳಗಿನ ಪ್ರಜ್ಞೆಯನ್ನು ಸದಾ ಎಚ್ಚರದಿಂದಿರುವಂತೆ ನೋಡಿಕೊಳ್ಳಲಿ.
- ರವಿ ಕಟ್ಕೆರೆ, ಕುಂದಾಪುರ
2 Comments
ಚಂದದ ಪ್ರತಿಕ್ರಿಯೆ.
Eye -opening and thought provoking!
Such innovative groups like dhimsale,and suvikas exist in rural parts is itself heartening… congratulations to Ravi Katkere.
Raghurama Rao Baikampady