ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-93’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ‘ನಾಟಕಾಷ್ಟಕ’ ಕಾರ್ಯಕ್ರಮದ 5ನೇ ದಿನದ ಕಾರ್ಯಕ್ರಮವು ದಿನಾಂಕ 30 ಡಿಸೆಂಬರ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕವಿ ಅಭಿಲಾಷ ಸೋಮಯಾಜಿ ಮಾತನಾಡಿ “ಕೇವಲ ಕವಿತೆಗಳನ್ನಾಧರಿಸಿದ ಏಕವ್ಯಕ್ತಿ ನಾಟಕವನ್ನು ರಂಗದಲ್ಲಿ ಪ್ರಯೋಗಿಸಲಾಗಿರುವ ನಾಟಕ ‘ಹಕ್ಕಿ ಮತ್ತು ಅವಳು’. ಹೆಣ್ಣಿನ ಮನಸ್ಥಿತಿಯನ್ನು ವಿವಿಧ ಆಯಾಮಗಳಲ್ಲಿ ಬಿಂಬಿಸುವ ಪ್ರಸ್ತುತಿ ಇದಾಗಿದೆ. ಹೆಣ್ಣೋರ್ವಳು ಅಬಲೆಯಲ್ಲ, ಸಬಲೆ ಎನ್ನುವುದನ್ನು ರಂಗದ ಮೂಲಕ ಸಮಾಜಕ್ಕೆ ಬಿತ್ತರಿಸುವ ಕಾರ್ಯ ಸಫಲವಾಗಿದೆ.” ಎಂದು ಹೇಳಿದರು.
ಶ್ರೀಮತಿ ವಿನಿತಾ ಹಂದೆ, ನಟಿ ಕಾವ್ಯ ಹಂದೆ, ಉಪನ್ಯಾಸಕ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಗಣೇಶ್ ಅಮೀನ್ ಕೊಮೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಕಾವ್ಯಾಧಾರಿತ ಏಕವ್ಯಕ್ತಿ ನಾಟಕ ‘ಹಕ್ಕಿ ಮತ್ತು ಅವಳು’ ಪ್ರಸ್ತುತಿಗೊಂಡಿತು.