ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಕೊಡಿಯಾಲ್ ಬೈಲ್‌ನ ಶಾರದಾ ವಿದ್ಯಾಲಯದ ಗ್ರಂಥಾಲಯಕ್ಕೆ ನೂರು ಪುಸ್ತಕಗಳ ಹಸ್ತಾಂತರ ಸಮಾರಂಭವು ದಿನಾಂಕ 21 ಜುಲೈ 2025ರಂದು ನಡೆಯಿತು.
ಸಮಾರಂಭದಲ್ಲಿ ಓದಿನ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕಿಯಾದ ಡಾ. ಮೀನಾಕ್ಷಿ ರಾಮಚಂದ್ರ “ಪುಸ್ತಕ ಓದುವ ಹವ್ಯಾಸದಿಂದ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ, ಅಪಾರ ಜ್ಞಾನ ಸಂಪತ್ತು ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳು ಜ್ಞಾನ, ಬುದ್ದಿ, ಮೌಲ್ಯದ ಕ್ರಿಯಾಶೀಲ ವಿಕಸನಕ್ಕಾಗಿ ಪಠ್ಯಕ್ರಮಗಳ ಓದಿನ ಜತೆಗೆ ಪೂರಕ ಪುಸ್ತಕಗಳನ್ನು ಓದುವುದು ಅವಶ್ಯವಾಗಿದೆ. ಓದು ದೈನಂದಿನ ಬದುಕಿನ ಒಂದು ಅಂಗವಾಗಬೇಕು. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು ಪುಸ್ತಕ ಓದಲು ಸಮಯ ಮೀಸಲಿರಿಸಬೇಕು” ಎಂದು ಹೇಳಿದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಮಾತನಾಡಿ “ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದ ಉಪಯುಕ್ತ ಪುಸ್ತಕಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಸದ್ವಿನಿಯೋಗ ಪಡಿಸಿಕೊಳ್ಳಬೇಕು” ಎಂದರು. ಅ. ಭಾ. ಸಾ. ಪ . ಇದರ ದ. ಕ. ಜಿಲ್ಲಾಧ್ಯಕ್ಷರಾದ ಪಿ. ಬಿ. ಹರೀಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಶಾರದಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಚಂದ್ರಿಕಾ ಭಂಡಾರಿ, ಉಪ ಪ್ರಾಂಶುಪಾಲೆ ಲಕ್ಷ್ಮೀ ಉಡುಪ, ಸಹಾಯಕ ಪ್ರಾಂಶುಪಾಲೆ ಲಕ್ಷ್ಮೀ ಪೈ, ಯಕ್ಷಾರಾಧನಾ ಕಲಾ ಕೇಂದ್ರದ ನಿರ್ದೇಶಕ ರತ್ನಾಕರ್ ರಾವ್, ಅ. ಭಾ. ಸಾ. ಪ. ಜಿಲ್ಲಾ ಖಜಾಂಜಿ ಭಾಸ್ಕರ ರೈ ಕಟ್ಟ, ಸಾಹಿತ್ಯ ಕೂಟ ಪ್ರಮುಖ್ ಗೀತಾ ಲಕ್ಷ್ಮೀಶ್, ಸಮಿತಿ ಸದಸ್ಯ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.

