ತೆಕ್ಕಟ್ಟೆ: ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರ ‘ಸಿನ್ಸ್ – 1999 ಶ್ವೇತಯಾನ – 87’ ಕಾರ್ಯಕ್ರಮದಡಿಯಲ್ಲಿ ರಸರಂಗ ಪ್ರಸ್ತುತ ಪಡಿಸಿದ ‘ಹನುಮದ್ವಿಲಾಸ’ ಯಕ್ಷಗಾನ ಪ್ರದರ್ಶನವು ದಿನಾಂಕ 22 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಧನಸಹಾಯ ಯೋಜನೆಯಡಿಯಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಚಂದ್ರ ಕುಲಾಲ್ ನೀರ್ಜಡ್ಡು ಹಾಗು ಜಿಲ್ಲಾ ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ಉದಯ್ ಹೊಸಾಳ ಈವರನ್ನು ಅಭಿನಂದಿಸಲಾಯಿತು. ಗೌರವಾನ್ವಿತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ “ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿರಬೇಕಾದರೆ ಕಲೆಯ ಹಾಗೂ ಇನ್ನಿತರ ಸಂಘಟನೆಯ ಮುಖ್ಯಸ್ಥರಾಗಿದ್ದಾಗ ಮಾತ್ರ ಸಾಧ್ಯ. ಇಂತಹ ಕ್ರಿಯಾಶೀಲರನ್ನು ಗುರುತಿಸುವ ಕಾರ್ಯ ಸರಕಾರದಿಂದ ಆಗಬೇಕು. ಮಕ್ಕಳು, ಮಹಿಳೆಯರು ಯಕ್ಷರಂಗಕ್ಕೆ ಪಾದಾರ್ಪಣ ಮಾಡುವ ಸಂಖ್ಯೆ ಹೆಚ್ಚಾಗಬೇಕು. ಕಥೆಗೆ ಹಾಗೂ ಕಲೆಗೆ ಲೋಪ ಆಗದಂತೆ ರಂಗದಲ್ಲಿ ಉಳಿಸಿ, ದಾಟಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಸಾಧ್ಯ.” ಎಂದರು.
ಮಂಗಳೂರು ಯಕ್ಷಧಾಮದ ಜನಾರ್ದನ ಹಂದೆ ಮಾತನಾಡಿ “ಕಲಾವಿದರನ್ನು ಅವಕಾಶ ಕೊಟ್ಟು ಪ್ರೋತ್ಸಾಹಿಸುವ ಕಾರ್ಯ ಪ್ರಶಂಸನೀಯ. ಸರ್ವಾಂಗ ಸುಂದರ ಕಲೆಯಾದ ಯಕ್ಷಗಾನವನ್ನು ಈ ವರೆಗೆ ಪೋಷಿಸಿ, ಈ ಜನಾಂಗಕ್ಕೆ ದಾಟಿಸಿದ ಗಣ್ಯರನೇಕರ ಆಶೋತ್ತರಗಳನ್ನು ಇಂದಿನ ಸಮಾಜ ಉತ್ತಮ ಪ್ರದರ್ಶನ ನೀಡಿ ಮುಂದೆ ದಾಟಿಸಬೇಕು. ಉಭಯ ಸಂಸ್ಥೆಗಳ ಸಾಧನೆ ವರ್ಣನಾತೀತ.” ಎಂದರು.
ಯಕ್ಷಗಾನದ ಅಭಿಮಾನಿ ಮೋಹನಚಂದ್ರ ಪಂಜಿಗಾರು, ಸಕು ರಮೇಶ್, ವೀಣಾ ಕಾರಂತ್, ರಜನಿ ಹಂದೆ, ಗಾಯತ್ರಿ ಹೆಬ್ಬಾರ್, ಪಿ. ಶ್ರೀಧರ ಹಂದೆಯವರ ಪುತ್ರಿಯರು ಉಪಸ್ಥಿತರಿದ್ದರು. ಪಾರ್ವತಿ ಮೈಯ್ಯ, ನಮನ ಹೇರ್ಳೆ, ಸಮ್ಮಾನ ಪತ್ರ ವಾಚಿಸಿದರು. ಬಳಿಕ ಪ್ರಸಿದ್ಧ ಬಯಲಾಟ ಮೇಳದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ಹನುಮದ್ವಿಲಾಸ’ ಪ್ರಸ್ತುತಿಗೊಂಡಿತು.