ಬಂಟ್ವಾಳ: ಬೆಂಗಳೂರಿನ ಡಿ. ಜಿ ಯಕ್ಷ ಫೌಂಡೇಷನ್ ಆಯೋಜಿಸಿದ್ದ ಶ್ರೀ ಹರಿಲೀಲಾ ಯಕ್ಷ ನಾದೋತ್ಸವ ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2024ನೇ ಭಾನುವಾರದಂದು ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಯಕ್ಷಗಾನ ಕಲಾದಂಪತಿ ಲೀಲಾವತಿ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ನೀಡುವ ‘ಶ್ರೀ ಹರಿಲೀಲಾ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಯಕ್ಷ ಗಾನ ಕಲಾವಿದ ಹಾಗೂ ಸಂಶೋಧಕ ಪ್ರಭಾಕರ ಜೋಶಿ ಮಾತನಾಡಿ “ಯಕ್ಷಗಾನವು ಈಗ ಹಲವು ಕವಲುಗಳಾಗಿ ವಿಭಜನೆಗೊಂಡಿದೆ. ಇಂಥ ಸನ್ನಿವೇಶದಲ್ಲಿ ಪರಂಪರೆಯನ್ನು ಉಳಿಸುವ ಕರ್ತವ್ಯ ಗುರುಗಳು ಹಾಗೂ ಕಲಾವಿದರ ಮೇಲಿದೆ.” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ “ಗುರು ಶಿಷ್ಯ ಸಂಬಂಧ ಆಪ್ತವಾದುದು. ಇಂದು ಶಿಷ್ಯರ ಪ್ರೀತಿಯಲ್ಲಿ ಮಿಂದಿದ್ದೇನೆ. ಯಕ್ಷಗಾನದಲ್ಲಿ ಗುರು ಪರಂಪರೆ ಮುಂದುವರಿಯಬೇಕು.” ಎಂದು ಹೇಳಿದರು. ಸಹ ಪ್ರಾಧ್ಯಾಪಕ ಪುರುಷೋತ್ತಮ ಭಟ್ ನಿಡುವಜೆ ಅಭಿನಂದನಾ ನುಡಿಗಳನ್ನಾಡಿದರು.
ಯಕ್ಷಕಲಾ ಪೊಳಲಿ ಸಂಸ್ಥೆಯ ಸಂಚಾಲಕ ವೆಂಕಟೇಶ ನಾವಡ, ಪ್ರಮುಖರಾದ ಬಾಲಚಂದ್ರ ರಾವ್, ಕೆ. ಎಲ್. ಕುಂಡಂತಾಯ, ಆನಂದ ಗುಡಿಗಾರ, ಜನಾರ್ದನ ಅಮ್ಮುಂಜೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಂದಳಿಕೆಯ ಮುದ್ದಣ ಪ್ರಕಾಶನ – ಅಧ್ಯಯನ ಕೇಂದ್ರ ಪ್ರಕಟಿಸಿದ ‘ರತ್ನಾವತಿ ಕಲ್ಯಾಣ – ಕುಮಾರ ವಿಜಯ ; ಪ್ರಸಂಗ ನಡೆ – ರಂಗ ತಂತ್ರ’ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಹರಿಲೀಲಾ ಶಿಷ್ಯ ವೃಂದದವರು ನಡೆಸಿಕೊಟ್ಟ ಯಕ್ಷ-ಗಾನ-ನಾದ ವೈಖರಿಯಲ್ಲಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಗಿರೀಶ್ ರೈ ಕಕ್ಕೆಪದವು, ಅಡೂರು ಜಯರಾಮ,ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಅವರ ಭಾಗವತಿಕೆ, ಅಡೂರು ಲಕ್ಷ್ಮಿನಾರಾಯಣ ರಾವ್, ಶಂಕರ ಭಟ್ ಕಲ್ಮಟ್ಟ, ಸೋಮಶೇಖರ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ವಿಕಾಸ್ ರಾವ್ ಪುನರೂರು, ಅವಿನಾಶ್ ಬೈಪಾಡಿತ್ತಾಯ ಮತ್ತು ಸಮರ್ಥ್ ಉಡುಪ ಅವರ ಚೆಂಡೆ-ಮದ್ದಳೆ ಸೊಗಯಿಸಿತು. ‘ಸುಧನ್ವ ಮೋಕ್ಷ’ ತಾಳಮದ್ದಳೆ ನಡೆಯಿತು. ಹರಿನಾರಾಯಣ ಬೈಪಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಭಟ್ ಕೊಂಕಣಾಜೆ ಸ್ವಾಗತಿಸಿ, ಸಾಯಿ ಸುಮಾ ನಾವಡ ನಿರೂಪಿಸಿದರು.