ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು, ರಾಮಕೃಷ್ಣ ಮಿಷನ್ ಮಂಗಳೂರು ಇವುಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮತ್ತು ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ‘ಹರಿಕಥಾ ಸ್ಪರ್ಧೆ’ಯನ್ನು ದಿನಾಂಕ 27 ಡಿಸೆಂಬರ್ 2025ರಂದು ರಾಮಕೃಷ್ಣ ಮಠದ ಅಮೃತ ಭವನದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ “ಎಳೆವೆಯಿಂದಲೇ ಹರಿಕಥೆ ಅಳವಡಿಸುವುದರಿಂದ ನೈತಿಕ ಶಿಕ್ಷಣ ಸುಗಮವಾಗಿ ಪಡೆಯಬಹುದು. ಪುರಾಣ ಕಥೆಗಳನ್ನು ತಿಳಿಯುವ ಮೂಲಕ ನಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿ ಕೊಳ್ಳಬಹುದು” ಎಂದು ಹೇಳಿದರು.


ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಅನೇಕ ಕಡೆ ಹರಿದಾಸರಿಗೆ ಹೆಚ್ಚಿನ ಪ್ರಾಶಸ್ಯ ಸಿಗುತ್ತಿರುವುದು ಖುಷಿಯ ವಿಚಾರ” ಎಂದರು.


ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಸೀಮಿತವಾಗಿದ್ದ ಈ ಸ್ಪರ್ಧೆ ಈ ವರ್ಷ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗಿತ್ತು. ದಕ್ಷಿಣ ಕನ್ನಡ, ಕಾಸರಗೋಡು ಮಾತ್ರವಲ್ಲದೆ ಬೆಂಗಳೂರು, ಶಿವಮೊಗ್ಗ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಯ್ದ 22 ಮಂದಿ ಯುವ ಕಥಾಕೀರ್ತನ ಪ್ರತಿಭೆಗಳು ಭಾಗವಹಿಸಿದ್ದರು. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಹರಿಕಥಾ ಪರಿಷತ್ತಿನ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಉದ್ಯಮಿ ಎಂ. ರವೀಂದ್ರ ಶೇಟ್, ವಿವಿಧ ಜಿಲ್ಲೆಗಳ ಹರಿದಾಸರು ಇದ್ದರು. ಹರಿಕಥಾ ಪರಿಷತ್ ದ.ಕ ಜಿಲ್ಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಪ್ರಾಸ್ತಾವಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಹರಿದಾಸ ಎಸ್ ಪಿ. ಗುರುದಾಸ್ ನಿರೂಪಿಸಿದರು.

