ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಇವರು ಆಯೋಜಿಸಿದ್ದ ವಿದ್ವಾನ್ ಎಂ. ಲಕ್ಷ್ಮೀನಾರಾಯಣ ಭಟ್ ಸಂಸ್ಮರಣಾರ್ಥ ದಿನಾಂಕ 30 ಆಗಸ್ಟ್ 2025ರಂದು ಮಂಗಳೂರು ಶರವು ರಸ್ತೆಯ ಶ್ರೀ ರಾಧಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿ ‘ಹರಿಕಥಾ ಸಪ್ತಾಹ’ವು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾರದೀ ಪ್ರಕಾಶನ ಪ್ರಕಟಿಸಿದ ಲಕ್ಷ್ಮೀನಾರಾಯಣ ಭಟ್ಟರ ಕುರಿತಾದ ಪುಸ್ತಕ ‘ನುಡಿನಮನ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಹರಿಕಥಾ ರಂಗಕ್ಕೆ ಬಹಳಷ್ಟು ಕೊಡುಗೆ ನೀಡಿರುವ ಖ್ಯಾತ ತಬ್ಲಾ ವಾದಕ ಕೀರ್ತಿಶೇಷ ಎಂ. ಲಕ್ಷ್ಮೀನಾರಾಯಣ ಭಟ್ಟರಂತಹ ಹಿರಿಯ ಕಲಾವಿದರ ಸಂಸ್ಮರಣೆ ಯುವಕಲಾವಿದರಿಗೆ ಪ್ರೇರಣೆಯಾಗುವುದಲ್ಲದೆ ಹರಿಕಥಾ ಪರಂಪರೆಯ ಪೋಷಣೆಗೆ ಸಹಕಾರಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ರಾಧಾಕೃಷ್ಷ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಎಂ. ಕೇಶವ ಭಟ್ ಸಪ್ತಾಹವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಹರಿಕಥಾ ರಂಗಕ್ಕೆ ಲಕ್ಷ್ಮೀನಾರಾಯಣ ಭಟ್ಟರ ಕೊಡುಗೆಯನ್ನು ಸ್ಮರಿಸಿದರು. ‘ನುಡಿನಮನ’ ಪುಸ್ತಕದ ಸಂಪಾದಕರಾದ ಡಾ. ಎಲ್. ದತ್ತಾತ್ರೇಯ ವೇಲಣಕರ್, ಜರ್ಮನಿಯಲ್ಲಿ ತಂತ್ರಜ್ಞರಾಗಿರುವ ಲಕ್ಷ್ಮೀನಾರಾಯಣ ಭಟ್ರ ಸುಪುತ್ರ ಅನಂತಕೃಷ್ಣ ಭಟ್, ಕಲಾವಿದ ರಾಜೇಂದ್ರ ಭೆಂಡೆ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಉಪಾಧ್ಯಕ್ಷ ಬಿ. ನಾರಾಯಣ ರಾವ್ ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಸಂಚಾಲಕರಾದ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಖಜಾಂಚಿ ಡಾ. ಎಸ್.ಪಿ. ಗುರುದಾಸ್ ನಿರ್ವಹಿಸಿದರು. ಬಳಿಕ ಬೆಂಗಳೂರಿನ ಪಂಡಿತ್ ದತ್ಯಾತ್ರೇಯ ಎಲ್. ವೇಲಣಕರ್ ‘ಶ್ರೀ ದೇವೀ ಮಹಾತ್ಮ್ಯೆ; ಗಾನ ಕಥಾಕೀರ್ತನೆ ನಡೆಸಿಕೊಟ್ಟರು. ಯೋಗೀಶ್ ಭಟ್ ತಬ್ಲಾದಲ್ಲಿ ಹಾಗೂ ಪ್ರಸಾದ ಕಾಮತ್ ಹಾರ್ಮೋನಿಯಂನಲ್ಲಿ, ಶ್ರದ್ಧಾ ಗುರುದಾಸ್ ತಾಳದಲ್ಲಿ ಸಹಕರಿಸಿದರು. ಇದಕ್ಲೆ ಮುಂಚಿತವಾಗಿ ಯುವ ಕೀರ್ತನಕಾರೆ ಕುಮಾರಿ ಗಾಯತ್ರೀ ಆಚಾರ್ಯ ಕೊಂಡೆವೂರು ಇವರಿಂದ ‘ಕನಕನಿಗೊಲಿದ ಗೋವಿಂದ’ ಹರಿಕಥೆ ನಡೆಯಿತು. ಕುಮಾರಿ ಶ್ರಾವಣ್ಯ ಹಾಗೂ ಮಾಸ್ಟರ್ ಗುರು ಅಭಿಷೇಕ್ ಹಿಮ್ಮೇಳದಲ್ಲಿ ಸಹಕರಿಸಿದರು.