ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಕದ್ರಿ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಏರ್ಪಡಿಸಿದ ‘ಮಕ್ಕಳ ಹರಿಕಥೆ ಸ್ಪರ್ಧೆ’ಯನ್ನು ದಿನಾಂಕ 31-12-2023ರಂದು ವಿಜಯ ಬ್ಯಾಂಕ್, ನಿವೃತ್ತ ಚೀಫ್ ಮ್ಯಾನೇಜರ್ ಸುಂದರ ಶೆಟ್ಟಿ ಬೆಟ್ಟಂಪಾಡಿ ಇವರು ಉದ್ಘಾಟಿಸಿ “ಆಧುನಿಕ ಕಾಲಘಟ್ಟದಲ್ಲಿ ಬಹುಮಾಧ್ಯಮ ಮನೋರಂಜನೆಗಳ ಮಧ್ಯೆ ವಿದ್ಯಾರ್ಥಿಗಳಲ್ಲಿ ಹರಿಕಥೆಯಂತಹ ಶಾಸ್ತ್ರೀಯ ಕಲೆಗಳ ಮೇಲೆ ಒಲವು ಮೂಡಿಸುವ ಪ್ರಯತ್ನ ಆಗಬೇಕು. ವಿದ್ಯಾರ್ಜನೆಯೊಂದಿಗೆ ಶಿಷ್ಟಕಲೆಗಳ ಹವ್ಯಾಸವು ಮಕ್ಕಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿಸಲು ಸಹಕಾರಿಯಾಗುವುದು” ಎಂದು ಅಭಿಪ್ರಾಯಪಟ್ಟರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅವರು ಮಾತನಾಡಿ “ಹರಿಕಥೆ ಕಲೆಯಲ್ಲೂ ಮಕ್ಕಳಿಗೆ ಆಸಕ್ತಿ ಬರಬೇಕೆನ್ನುವ ದೃಷ್ಟಿಯಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ನಿರಂತರವಾಗಿಸುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪಂದಿಸಬೇಕು” ಎಂದರು. ಮುಖ್ಯ ಅಭ್ಯಾಗತರಾಗಿ ಕಲಾ ಸಾಹಿತಿ ಜನಾರ್ದನ ಹಂದೆ, ಹರಿಕಥಾ ಪರಿಷತ್ತಿನ ಉಡುಪಿ ಜಿಲ್ಲಾ ಸಂಚಾಲಕರಾದ ವೈ. ಅನಂತ ಪದ್ಮನಾಭ ಭಟ್ ಕಾರ್ಕಳ, ಶ್ರೀಮತಿ ಮಾಲತಿ ಭಂಡಾರ್ಕರ್ ಭಾಗವಹಿಸಿ ಶುಭ ಕೋರಿದರು. ಕೂಟ ಮಹಾಜಗತ್ತಿನ ಅಧ್ಯಕ್ಷ ಚಂದ್ರಶೇಖರ ಮಯ್ಯ, ಹರಿಕಥಾ ಪರಿಷತ್ತಿನ ಉಪಾಧ್ಯಕ್ಷ ರಾದ ಕೆ. ನಾರಾಯಣ್ ರಾವ್ ಉಪಸ್ಥಿತರಿದ್ದರು.
ದ.ಕ. ಉಡುಪಿ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕುಮಾರಿ ಶ್ರದ್ಧಾ ಗುರುದಾಸ್ ಅವರಿಗೆ ಶ್ರೀಮತಿ ಕುಮಾರಿ ಹ್ಯಾರಿ ಸ್ಮಾರಕ ಗೌತಮ್ ಬೋಪಣ್ಣ ಕುಟ್ಟ ಪ್ರಾಯೋಜಿಸಿದ ರೂ.10,000/- ನಗದು, ದ್ವಿತೀಯ ಬಹುಮಾನ ಕುಮಾರಿ ಅಭಿಜ್ಞಾ ಭಟ್ ಬದಿಯಡ್ಕ ಅವರಿಗೆ ಅಂಬಾ ತನಯ ಮುದ್ರಾಡಿ ಸ್ಮಾರಕ ವೈ ಅನಂತಪದ್ಮನಾಭ ಭಟ್ ಕಾರ್ಕಳ ಪ್ರಾಯೋಜಿತ ರೂ.7,000/- ನಗದು, ತೃತೀಯ ಬಹುಮಾನ ಕುಮಾರಿ ಪೂಜಾ ವಿ. ಐಲ ಅವರಿಗೆ ಶ್ರೀಮತಿ ಮಾಲತಿ ಭಂಡಾರ್ಕರ್ ಪ್ರಾಯೋಜಿತ ರೂ.4,000/- ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕೋಟೆಕಾರಿನ ಶೃಂಗೇರಿ ಶಾಖಾಮಠದ ಧರ್ಮಾಧಿಕಾರಿ ಶ್ರೀ ಸತ್ಯಶಂಕರ ಬೊಳ್ಳಾವ, ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ, ಹರಿದಾಸ ಚಂದ್ರಕಾಂತ ಭಟ್ ಅಶ್ವತ್ಥಪುರ ತೀರ್ಪುಗಾರರಾಗಿ ಸಹಕರಿಸಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಖಜಾಂಚಿ ಡಾ. ಎಸ್ ಪಿ ಗುರುದಾಸ್ ಪ್ರಸ್ತಾವನೆ ಗೈದರು. ಮಂಗಳೂರು ಸಂಚಾಲಕ ಸುಧಾಕರ ರಾವ್ ಪೇಜಾವರ ನಿರೂಪಿಸಿ, ಕಾಸರಗೋಡು ಸಂಚಾಲಕ ಕಲಾರತ್ನ ಶಂ.ನಾ. ಅಡಿಗ ಕುಂಬ್ಳೆ ವಂದಿಸಿದರು.